ಕಲಬುರಗಿ: ಅಪಘಾತಗಳಲ್ಲಿ ದೇಹದ ಬೆನ್ನುಮೂಳೆ ಮುರಿದು (ಪೆಲವಿಕ್ ಫಾಕ್ಚರ್‌ದಿಂದ) ಇನ್ನೇನು ಬದುಕೇ ಇಲ್ಲ ಎಂಬ ಚಿಂತೆಯಲ್ಲಿ ಮುಳುಗಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದ ಮೂವರಿಗೆ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸುವ ಮೂಲಕ ರೋಗಿಗಳ ಪಾಲಿಗೆ ಮನ್ನೂರ ಆಸ್ಪತ್ರೆ ವೈದ್ಯರು ನಿಜವಾದ ದೇವರಾಗಿ ಪರಿಣಮಿಸಿದ್ದಾರೆ.
ಪ್ರತ್ಯೇಕವಾಗಿ ಮೂರು ಕಡೆಗಳಲ್ಲಿ ನಡೆದ ಅಪಘಾತಗಳಲ್ಲಿ ಮೂವರು ಬೆನ್ನುಮೂಳೆ ಮುರಿದುಕೊಂಡು ನಗರದ ಬಾರೆಹಿಲ್ಸ್ ಬಳಿಯ ಮನ್ನೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಮೂವರಿಗೂ ಆಸ್ಪತ್ರೆಯ ನುರಿತ ಮೂಳೆ ಶಸ್ತ್ರಚಿಕಿತ್ಸಾ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಫಾರೂಕ್ ಮನ್ನೂರ ಹಾಗೂ ಮೂಳೆ ಶಾಸ್ತ್ರಜ್ಞರು ಡಾ. ವಿವೇಕ ವಿರೇಶ್ ತಿಳಿಸಿದರು.
ಚಿತ್ತಾಪುರ ತಾಲೂಕಿನ ಅಲ್ಲಗುಡ ಗ್ರಾಮದ 24 ವರ್ಷದ ಯುವಕ ಡಿ.1 ರಂದು ಗ್ರಾಮದಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದು ಬೆನ್ನುಮೂಳೆ ಮುರಿದುಕೊಂಡಿದ್ದರು. ಚಿಂಚೋಳಿ ತಾಲೂಕಿನ ಕೆರೊಳ್ಳಿ ಗ್ರಾಮದ ವಿದ್ಯಾನಂದ (55) ಡಿ.1 ರಂದು ದ್ವಿಚಕ್ರ ವಾಹನದಲ್ಲಿ ಹೋಗುವಾಗ ರಸ್ತೆ ಅಪಘಾತವಾಗಿ ಬೆನ್ನುಮೂಳೆ ಮುರಿದುಕೊಂಡಿದ್ದರು. ಇನ್ನೊಂದು ಪ್ರಕರಣದಲ್ಲಿ ಡಿ.5 ರಂದು ಹುಮನಾಬಾದ ಹತ್ತಿರ ರಸ್ತೆ ಅಪಘಾತದಲ್ಲಿ ಉಮಾದೇವಿ(45) ಎಂಬ ಮಹಿಳೆ ಬೆನ್ನುಮೂಳೆ ಮುರಿದುಕೊಂಡಿದ್ದರು. ಇವರನ್ನು ಮನ್ನೂರ ಆಸ್ಪತ್ರೆಗೆ ದಾಖಲಿಸಿದ್ದು, ತಡಮಾಡದೆ ಆಸ್ಪತ್ರೆಯ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ 10 ದಿನಗಳಲ್ಲಿ ಗುಣಮುಖರಾಗುವಂತೆ ಮಾಡಿದ್ದಾರೆ.
ಸದ್ಯ ಮೂವರು ಚೇತರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮನುಷ್ಯನ ಬೆನ್ನುಮೂಳೆ ಮುರಿದರೆ ಬದುಕುಳಿಯುವುದೇ ಕಷ್ಟ. ಇಂತಹ ಪ್ರಕರಣದಲ್ಲಿ ತೀವ್ರ ರಕ್ತಸ್ರಾವವಾಗಿ ಪ್ರತಿಶತ 20 ರಷ್ಟು ರೋಗಿಗಳು ಜೀವ ಕಳೆದುಕೊಳ್ಳುತ್ತಾರೆ. ಸಮಯಕ್ಕೆ ಸರಿಯಾಗಿ ನುರಿತ ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿ ಪ್ರಾಣ ಉಳಿಸಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: 185 ಕೆಜಿ ತೂಕದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ.. ಮರುಜೀವ ಕೊಟ್ಟ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರಿಗೆ ಕೃತಜ್ಞತೆ