ಕಲಬುರಗಿ : ವಿವಾಹಿತ ಮಹಿಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸೀತನೂರು ಗ್ರಾಮದ ಶಾಹೀದಾ ಬೇಗಂ(26) ಎಂದು ಗುರುತಿಸಲಾಗಿದೆ. ಗಂಡನ ಮನೆಯವರೇ ಕೊಲೆ ಮಾಡಿರುವುದಾಗಿ ಮೃತ ಶಾಹೀದಾ ಬೇಗಂ ಪೋಷಕರು ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಜೇವರ್ಗಿ ತಾಲೂಕಿನ ಗೌಂವ್ಹಾರ ಗ್ರಾಮದ ಶಾಹೀದಾ ಬೇಗಂರನ್ನು ಸೀತನೂರ ಗ್ರಾಮದ ಖಾಜಾ ಹುಸೇನ್ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ ಶಾಹೀದಾ ಬೇಗಂ ಪೋಷಕರು ತಮ್ಮ ಜಾಗವನ್ನು ಮಾರಾಟ ಮಾಡಿ ನಾಲ್ಕು ತೊಲೆ ಚಿನ್ನಾಭರಣ ಐವತ್ತು ಸಾವಿರ ನಗದನ್ನು ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರಂತೆ. ಕೃಷಿ ಮಾಡಿಕೊಂಡಿದ್ದ ಖಾಜಾ ಹುಸೇನ್ ಕುಡಿತದ ಚಟ ಹೊಂದಿದ್ದ. ಅಲ್ಲದೇ ನಿತ್ಯ ಮನೆಗೆ ಕುಡಿದು ಬಂದು ಬೇಗಂ ಜೊತೆಗೆ ಜಗಳ, ದೈಹಿಕ ಹಲ್ಲೆ ನಡೆಸುತ್ತಿದ್ದ. ಅದೂ ಅಲ್ಲದೇ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ.
ಬೇಗಂ ಪೋಷಕರು ದುಡಿಯಲು ಹೈದರಾಬಾದ್ಗೆ ತೆರಳಿದ್ದರು. ಅವರ ಬಳಿ ಹಣವಿಲ್ಲ ಎಂದು ಹೇಳಿದರೂ ಹುಸೇನ್ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ ಎಂದು ಮೃತ ಬೇಗಂ ತನ್ನ ಸಹೋದರಿ ಬಳಿ ಅಳಲು ತೋಡಿಕೊಂಡಿದ್ದಳಂತೆ. ಈ ವಿಷಯ ಶಾಹೀದಾ ಬೇಗಂ ಮನೆಗೆ ಗೊತ್ತಾಗಿ, ಹಲವು ಬಾರಿ ರಾಜಿ ಸಂಧಾನ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ನಡುವೆ ಶಾಹೀದಾ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಗಂಡ ಮತ್ತು ಆತನ ಮನೆಯವರು ಕಿರುಕುಳ ಕೊಟ್ಟು ಕೊಲೆ ಮಾಡಿ ಬಳಿಕ ನೇಣು ಹಾಕಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಶಾಹೀದಾ ಪತಿ ಖಾಜಾ ಹುಸೇನ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ ಮತ್ತು ಮರಣೋತ್ತರ ವರದಿ ನಂತರಷ್ಟೇ ಶಾಹೀದಾ ಬೇಗಂ ಸಾವಿಗೆ ಕಾರಣ ತಿಳಿದು ಬರಲಿದೆ.
ಹಾಸನದಲ್ಲಿ ವಿವಾಹಿತ ಮಹಿಳೆ ಸಾವು : ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಟ್ಟೆಕೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಮೃತರನ್ನು ಅನುಷಾ (21) ಎಂದು ಗುರುತಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ಚನ್ನರಾಯಪಟ್ಟಣ ತಾಲೂಕಿನ ನಟ್ಟೆಕೆರೆ ಗ್ರಾಮದ ಕಿರಣ್ ಜೊತೆ ಅನುಷಾ ಅವರ ವಿವಾಹವಾಗಿತ್ತು. ಆದರೆ, ಅನುಷಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತ ಮಹಿಳೆಯ ಕುಟುಂಬಸ್ಥರು ದೂರು ದಾಖಲು ಮಾಡಿದ್ದರು.
ಇದನ್ನೂ ಓದಿ : 2ನೇ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದ ಸಾವು : ಶವ ನೋಡಲು ಮುಗಿಬಿದ್ದವರ ಮೇಲೆ ಲಾಠಿಚಾರ್ಜ್