ಕಲಬುರಗಿ: ಜಿಲ್ಲೆಯ ರೈತ ಸಂಘ, ಹಸಿರು ಸೇನೆ, ಆರ್ಕೆಎಸ್ ಸಂಘ, ಜನವಾದಿ ಮಹಿಳಾ ಸಂಘಟನೆ, ಜಿಲ್ಲಾ ಕಾಂಗ್ರೆಸ್ ಕಮಿಟಿ, ಕನ್ನಡಪರ, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಆಟೋ ಚಾಲಕರ ಸಂಘಟನೆಗಳು ಸೇರಿದಂತೆ ಸುಮಾರು 18ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಕರೆಗೆ ಬೆಂಬಲ ನೀಡಿವೆ.
ಹೋರಾಟಗಾರರು ಬೆಳಿಗ್ಗೆ 06 ಗಂಟೆಗೆ ನಗರದ ಕೆಎಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಪ್ರತಿಭಟನೆ ಆರಂಭ ಮಾಡಲಿದ್ದು, ನಗರ ಪ್ರವೇಶ ಮಾಡುವ ರಿಂಗ್ ರಸ್ತೆಗಳನ್ನು ನಾಕಾಬಂದಿ ಮಾಡಲಾಗುವುದು. ಆಟೋ ಚಾಲಕ ಸಂಘ, ದಾಲಮೀಲ್ ಮಾಲೀಕರ ಸಂಘ, ವರ್ತಕರು ಸೇರಿದಂತೆ ಅನೇಕ ವ್ಯಾಪಾರಸ್ಥರು ಬಂದ್ಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಶರಣಬಸಪ್ಪ ಮಮ್ಮಶೆಟ್ಟಿ ಮಾಹಿತಿ ನೀಡಿದರು.
ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕರೆ ಕೊಟ್ಟಿರುವ ಬಂದ್ನಲ್ಲಿ ಕಾಂಗ್ರೆಸ್ ಸಕ್ರಿಯವಾಗಿ ಪಾಲ್ಗೊಳ್ಳಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಕಚೇರಿಯಿಂದ ಮೆರವಣಿಗೆ ಆರಂಭಿಸಿ ನಗರದ ಗಂಜ್ ಪ್ರದೇಶ, ಆಳಂದ್ ಚಕ್ಪೋಸ್ಟ್, ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಸಂಚರಿಸಿ ಬಂದ್ ಆಚರಣೆ ಮಾಡಲಾಗುವುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಬ್ಬರು ಡಿಸಿಪಿ, ಐವರು ಎಸಿಪಿ, 17 ಜನ ಪೊಲೀಸ್ ಇನ್ಸ್ಪೆಕ್ಟರ್, 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸೇರಿದಂತೆ ಸಿಎಆರ್ 6 ಬೆಟಾಲಿಯನ್, ಕೆಎಸ್ಆರ್ಪಿ 3 ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.