ಸೇಡಂ(ಕಲಬುರಗಿ) : ವೈದ್ಯಕೀಯ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿಯಂತೆ ಹಾಸ್ಟೆಲ್ ಸಿಬ್ಬಂದಿಯನ್ನೂ ಕೊರೊನಾ ವಾರಿಯರ್ಸ್ಗಳೆಂದು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ಸಹಾಯಕ ಆಯುಕ್ತ ರಮೇಶ ಕೋಲಾರ ಮುಖಾಂತರ ಮನವಿ ಸಲ್ಲಿಸಿರುವ ಸಂಘದ ಸದಸ್ಯರು, ಬೆಂಗಳೂರಿನ ಕಾಡುಗೋಡಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಉಮೇಶಪ್ಪ ಇತ್ತೀಚೆಗೆ ಕೊರೊನಾಗೆ ಬಲಿಯಾಗಿದ್ದಾರೆ. ಅವರಿಗೆ ಕೊರೊನಾ ವಾರಿಯರ್ಸ್ಗಳಿಗೆ ನೀಡುವ 50 ಲಕ್ಷ ರೂ. ಪರಿಹಾರ ಧನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ, ವಿದ್ಯಾರ್ಥಿ ನಿಲಯಗಳನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಾಗಿ ಮತ್ತು ಕೊರೊನಾ ನಿಗಾ ಘಟಕಗಳಾಗಿ ಉಪಯೋಗಿಸಲಾಗುತ್ತಿದೆ.
ಅಲ್ಲಿ ಕಾರ್ಯನಿರ್ವಹಿಸುವ ವಾರ್ಡನ್ಗಳು, ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು ಹಾಗೂ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಪ್ರಾಂಶುಪಾಲರು ಇತರ ಸಿಬ್ಬಂದಿ ವರ್ಗದವರನ್ನೂ ಸಹ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಸರ್ಕಾರದ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಈ ವೇಳೆ ನೌಕರರ ಸಂಘದ ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ, ರಾಜಶೇಖರ್ ಹಾಗೂ ಇನ್ನಿತರ ವಸತಿ ನಿಲಯದ ಮೇಲ್ವಿಚಾರಕರು ಇದ್ದರು.