ಕಲಬುರಗಿ: ಕೊರೊನಾ ಸೋಂಕಿತ ತಾಯಿಗೆ ಚಿಕಿತ್ಸೆ ನೀಡುವಂತೆ ವೀರ ಯೋಧನ ಕೂಗು ಜಿಲ್ಲಾಡಳಿತಕ್ಕೆ ಕೇಳಿಸಿತ್ತು. ಆದರೆ ಆ ದೇವರಿಗೆ ಕೇಳಿಸಲಿಲ್ಲ. ಯೋಧನ ತಾಯಿ ಚಿಕಿತ್ಸೆ ಫಲಿಸದೇ ಇಹಲೋಕ ತೈಜಿಸಿದ್ದಾರೆ.
ತಾಯಿಗೆ ಆಮ್ಲಜನಕ ಕೊಡಿಸಿ ಎಂದು ಕಣ್ಣೀರಿಟ್ಟಿದ್ದ ಸಿಆರ್ಪಿಎಫ್ ಯೋಧ ಸಂಜೀವ ಪವಾರ ಅವರ ತಾಯಿ ನಿರ್ಮಲಾ ಪವಾರ ಚಿಕಿತ್ಸೆಗೆ ಸ್ಪಂದಿಸದೆ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಇಂದು ಸಾವಿಗೀಡಾಗಿದ್ದಾರೆ.
ನಿನ್ನೆ ಕಾಶ್ಮೀರದಿಂದಲೇ ಕಣ್ಣೀರಿಡುತ್ತಾ ವಿಡಿಯೋ ಮಾಡಿದ ಸಂಜೀವ, ತಮ್ಮ ತಾಯಿಯ ಪರಿಸ್ಥಿತಿ ವಿವರಿಸಿದ್ದರು. ಆಕ್ಸಿಜನ್ ಮತ್ತು ಬೆಡ್ ಕಲ್ಪಿಸುವಂತೆ ಗೋಗರೆದಿದ್ದರು. ಈ ಕುರಿತಾಗಿ ಮಾಧ್ಯಮಗಳಲ್ಲಿ ವರದಿ ಮಾಡಲಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ರಾತ್ರಿ ಯೋಧನ ತಾಯಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಅಸ್ತಮಾದಿಂದ ಬಳಲುತ್ತಿದ್ದ ನಿರ್ಮಲಾ ಅವರನ್ನು ಕೆಲ ದಿನಗಳ ಹಿಂದೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ರೋಗಿಗಳ ಆಕ್ರಂದನದಿಂದ ಭಯಭೀತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆ ಸಂದರ್ಭದಲ್ಲಿ ಕೋವಿಡ್ ತಪಾಸಣೆ ಮಾಡಲಾಗಿತ್ತು. ಬುಧವಾರ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು.
ಉಸಿರಾಟದ ತೊಂದರೆ ತೀವ್ರವಾಗುತ್ತಿದ್ದಂತೆಯೇ ನಿರ್ಮಲಾ ಪತಿ ದಾಮ್ಗು ಪವಾರ ತಮ್ಮ ಮಗ ಸಂಜೀವಗೆ ಕರೆ ಮಾಡಿ ತಿಳಿಸಿದ್ದರು. ಸಂಜೀವ್ ಕಾಶ್ಮೀರ್ನಿಂದಲೇ ವಿಡಿಯೋ ಮಾಡಿ ಸಹಾಯ ಕೋರಿದ್ದರು.
ಓದಿ: ಕಲಬುರಗಿಯಲ್ಲಿರುವ ತಾಯಿಗೆ ಕೊರೊನಾ : ದೇಶ ಕಾಯುತ್ತಲೇ ಅಮ್ಮನ ಬದುಕಿಸಿಕೊಡಿ ಎಂದು ಕಣ್ಣೀರಿಟ್ಟ ಯೋಧ!