ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಟ್ಯಾಂಕರ್ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಏಳು ಜನರ ಪೈಕಿ ಆರು ಜನ ಸ್ಥಳದಲ್ಲೇ ದುರ್ಮರಣಕ್ಕಿಡಾಗಿದ್ದಾರೆ.
ಮೃತರೆಲ್ಲರೂ ಚಿತ್ತಾಪುರ ತಾಲೂಕಿನ ನಾಲವಾರದವರು ಎನ್ನಲಾಗ್ತಿದೆ. ನಸ್ಮೀನ್ ಬೇಗಂ, ಬಿಬಿ ಫಾತೀಮಾ, ಅಬೂಬಕರ್, ಬಿಬಿ ಮರಿಯಮ್ಮ, ಮಹ್ಮದ್ ಪಾಷಾ ಮತ್ತು ಬಾಬಾ ಮೃತರು ಎಂದು ಗುರುತಿಸಲಾಗಿದೆ. ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿ ಆರು ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಓರ್ವ ಬಾಲಕ ಬದುಕುಳಿದಿದ್ದಾನೆ.
ಕೆಲಸದ ನಿಮಿತ್ತ ವಾಡಿ ಪಟ್ಟಣಕ್ಕೆ ಬಂದಿದ್ದ ಕುಟುಂಬ ವಾಪಸ್ ನಾಲವಾರಕ್ಕೆ ತೆರಳುವಾಗ ಹಲಕರ್ಟಿ ಬಳಿ ಟ್ಯಾಂಕರ್ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ವಾಡಿ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಇಬ್ಬರ ಸಾವು - ಗಂಗಾವತಿ: ನ್ಯಾಯಾಬೆಲೆ ಅಂಗಡಿ ಮಾಲಿಕರಿಗೆ ಕಮಿಷನ್ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ಗಂಗಾವತಿಯಿಂದ ಹೋಗುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ತಾಲ್ಲೂಕಿನ ಖೋರಾ ಎಂಬ ಗ್ರಾಮದ ಬಳಿ ತಡರಾತ್ರಿ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ವಡ್ಡರಹಟ್ಟಿ ಗ್ರಾಮದ ನ್ಯಾಯಾಬೆಲೆ ಅಂಗಡಿ ಮಾಲೀಕ ಸತೀಶ್ ಶಂಕ್ರಪ್ಪ(45) ಮತ್ತು ಕ್ರೂಸರ್ ವಾಹನ ಚಾಲಕ ಶಂಕರ್ ಭೀಮಪ್ಪ ಹುಳ್ಳಿ (35) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದೇ ಘಟನೆಯಲ್ಲಿ ನಗರದ ಏಳನೇ ವಾರ್ಡ್ನ ಮೊಹಮ್ಮದ ರಫಿ ಮೋಹಿಯುದ್ದೀನ್ ಸಾಬ ಹಾಗೂ ಚಿಕ್ಕಬೆಣಕಲ್ ಗ್ರಾಮದ ಲಿಂಗಪ್ಪ ಎಂಬುವವರು ಗಾಯಗೊಂಡಿದ್ದಾರೆ. ವಾಹನದಲ್ಲಿದ್ದ ಉಳಿದ ಆರು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಹಿನ್ನೆಲೆ: ನ್ಯಾಯಾಬೆಲೆ ಅಂಗಡಿಗಳಿಗೆ ಸರ್ಕಾರ ನೀಡುತ್ತಿರುವ ಕಮೀಷನ್ ಧರ ಹೆಚ್ಚಿಸುವಂತೆ ಒತ್ತಾಯಿಸಿ ನ್ಯಾಯಾಬೆಲೆ ಅಂಗಡಿ ಮಾಲೀಕರ ಒಕ್ಕೂಟದಿಂದ ಬೆಂಗಳೂರಿನ ಫ್ರಿಡಂ ಪಾರ್ಕ್ನಲ್ಲಿ ಗುರುವಾರ ರಾಜ್ಯ ಘಟಕದ ಕರೆ ಮೇರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ನಗರ ಮತ್ತು ಗ್ರಾಮೀಣ ಭಾಗದ ವಿವಿಧ ನ್ಯಾಯಬೆಲೆ ಅಂಗಡಿ ಮಾಲೀಕರು ತೆರಳಿದ್ದರು. ರಾತ್ರಿ ಹತ್ತು ಗಂಟೆಗೆ ತೆರಳಿದ್ದ ಈ ಕ್ರೂಸರ್ ವಾಹನ ತುಮಕೂರು ಬಳಿ ಪಂಕ್ಚರ್ ಆಗಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಗಮನಿಸಿದ ಚಾಲಕ ಶಂಕರ್ ಇನ್ನೊಂದು ಹತ್ತು ಕಿಲೋ ಮೀಟರ್ ಹೋದರೆ ತುಮಕೂರು ಬರಲಿದ್ದು, ಅಲ್ಲಿ ಪಂಕ್ಚರ್ ಹಾಕಿಸೋಣ ಎಂದು ಕ್ರೂಸರ್ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಬೇರೊಂದ ಚಕ್ರ ಹಾಕಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಈರುಳ್ಳಿ ಹೊತ್ತೊಯ್ಯುತ್ತಿದ್ದ ಮಿನಿ ಲಾರಿಯೊಂದು ಬಂದು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ತುಮಕೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ತುಮಕೂರು: ನಿಂತಿದ್ದ ಕ್ರೂಸರ್ ಕಾರಿಗೆ ಲಾರಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು