ಕಲಬುರಗಿ: ಶ್ರಾವಣ ಮಾಸದ ನಡುವಿನ ಸೋಮವಾರದ ಹಿನ್ನೆಲೆಯಲ್ಲಿ ಕಲಬುರ್ಗಿಯ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು.
ಶ್ರಾವಣ ಮಾಸದ ನಡುವಿನ ಸೋಮವಾರವಾದ ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುರಾಣ, ಭಜನೆ ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು.
ದೇವಸ್ಥಾನದಲ್ಲಿ ಭಕ್ತರು ಸಾಲುಗಟ್ಟಿ ನಿಂತು ಶರಣಬಸವೇಶ್ವರರ ಕತೃ ಗದ್ದುಗೆಯ ದರ್ಶನ ಪಡೆದು ಪುನೀತರಾದರು. ಕಲಬುರ್ಗಿ ಸೇರಿದಂತೆ ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಶರಣಬಸವೇಶ್ವರರ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಿದರು.
ಶ್ರಾವಣ ಮಾಸದ ನಡುವಿನ ಸೋಮವಾರದ ಹಿನ್ನೆಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ಕೆಲ ಭಕ್ತರು ಭಜನೆ ಮಾಡುತ್ತಾ, ಪಾದಯಾತ್ರೆಯ ಮೂಲಕ ಆಗಮಿಸಿ ಶರಣಬಸವೇಶ್ವರ ದೇವರಿಗೆ ಹರಕೆ ತೀರಿಸಿದರು. ಡೊಳ್ಳು ಕುಣಿತ, ಗೀಗಿ ಪದ, ಭಜನೆ ಪದ ನೆರೆದಿದ್ದ ಭಕ್ತರ ಗಮನ ಸೆಳೆದವು.
ಅಪಾರ ಭಕ್ತ ಸಮೂಹವನ್ನು ಹೊಂದಿರುವ ತ್ರಿವಿಧ ದಾಸೋಹಿ ಶರಣಬಸವೇಶ್ವರರ ಆರಾಧನೆ ಎಡೆಬಿಡದೆ ಸಾಗುತ್ತಿದ್ದು. ಶ್ರಾವಣ ಮಾಸದ ಹಿನ್ನಲೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾನಾ ಕಡೆಯಿಂದ ಭಕ್ತರು ಆಗಮಿಸುತ್ತಿದ್ದು, ಶರಣಬಸವೇಶ್ವರ ದರ್ಶನಕ್ಕೆ ಪಾತ್ರರಾಗುತ್ತಿದಾರೆ.