ಸೇಡಂ (ಕಲಬುರಗಿ): ಭಾರತದ ಅಂಡರ್ -19 ವನಿತೆಯರ ಕ್ರಿಕೆಟ್ ತಂಡದಲ್ಲಿ ಕಲಬುರಗಿಯ ಸೇಡಂ ನಿವಾಸಿ ಮಮತಾ ಮಡಿವಾಳ (18) ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಗ್ರಾಮೀಣ ಪ್ರತಿಭೆಯೊಂದು ರಾಷ್ಟ್ರ ಮಟ್ಟದಲ್ಲಿ ಮಿಂಚಲಿದೆ.
ನವೆಂಬರ್ನಲ್ಲಿ ಜೈಪುರದಲ್ಲಿ ನಡೆಯಲಿರುವ ಅಂಡರ್-19 ಕ್ರಿಕೆಟ್ ಪಂದ್ಯದಲ್ಲಿ ಮಮತಾ ಆಡಲಿದ್ದಾರೆ. ರಾಷ್ಟ್ರಮಟ್ಟದ ಪಂದ್ಯಗಳಲ್ಲಿ 180 ರನ್ ಬಾರಿಸಿರುವ ಮಮತಾ, ರಣಜಿಪಟು ಸಹ ಹೌದು. ಅಂಡರ್-16 ತಂಡದಲ್ಲಿ ನಾಲ್ಕು ಬಾರಿ ಭಾರತ ತಂಡವನ್ನು ಇವರು ಪ್ರತಿನಿಧಿಸಿದ್ದಾರೆ. ಇದರ ಜೊತೆಗೆ ನ್ಯಾಷನಲ್ ಪಂದ್ಯದ ವೇಳೆ ಒಂದು ಬಾರಿ ತಂಡದ ಕ್ಯಾಪ್ಟನ್ ಆಗಿದ್ದರು ಮಮತಾ.
ಕಲ್ಯಾಣ ನಾಡಿನ ಸೇಡಂ ತಾಲೂಕಿನ ಕೋಲಕುಂದಾ ಗ್ರಾಮದ ವೀರೇಶ- ಭಾಗ್ಯ ಮಡಿವಾಳ ದಂಪತಿಯ ಮಗಳಾಗಿ ಜನಿಸಿದ ಮಮತಾಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಹುಚ್ಚು. ಗುಲಬರ್ಗಾ ವಿವಿಯಲ್ಲಿ ಕಂಪ್ಯೂಟರ್ ಶಿಕ್ಷಣ ಮಾಡುತ್ತಾ ಜೀವನ ಸಾಗಿಸುತ್ತಿದ್ದ ವೀರೇಶ, ತನ್ನ ಮಗಳ ಕನಸನ್ನು ನನಸು ಮಾಡಲು ಆರು ವರ್ಷಗಳ ಹಿಂದೆ ನೌಕರಿ ತ್ಯಜಿಸಿ ದೂರದ ಊರು ಹೈದರಾಬಾದ್ಗೆ ತೆರಳಿದರು. ಉಪ್ಪಲ್ ಸ್ಟೇಡಿಯಂನಲ್ಲಿ ಮಗಳಿಗೆ ಕೋಚಿಂಗ್ ಕೊಡಿಸಿ ಇಂದು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಜಾಂಜ್ ಮೇಳದಲ್ಲಿ ತೆರಳಿ ಜನರಿಗೆ ಕೋವಿಡ್ ಲಸಿಕೆ: ಕೊಪ್ಪಳ ಜಿಲ್ಲಾಡಳಿತದ ವಿನೂತನ ಪ್ರಯತ್ನ