ಸೇಡಂ: ದಾನಿಗಳಿಂದ ಸ್ವೀಕರಿಸಿದ ದವಸ ಧಾನ್ಯಗಳ ಪೈಕಿ ಈವರೆಗೂ 3600 ಕಿಟ್ಗಳನ್ನು ಅವಶ್ಯಕತೆ ಇದ್ದ ಕುಟುಂಬಗಳಿಗೆ ತಲುಪಿಸಲಾಗಿದೆ ಎಂದು ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ ಮಾಹಿತಿ ನೀಡಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಕರೆದ ಎನ್ಜಿಒ, ದಾನಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಯಾವುದೇ ಪಕ್ಷ ಭೇದ, ಜಾತಿ ಭೇದ ಮಾಡದೇ ಕಷ್ಟದಲ್ಲಿರುವವರಿಗೆ ಕಿಟ್ಗಳನ್ನು ಸರಬರಾಜು ಮಾಡಲಾಗಿದೆ. ಪಡಿತರ ಕಾರ್ಡ್ ಹೊಂದಿರದವರು ಹಾಗೂ ಪಡಿತರಕ್ಕಾಗಿ ಅರ್ಜಿ ಹಾಕದ 1800 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರಿಗೂ ಸಹ ದವಸ ಧಾನ್ಯ ತಲುಪಿಸಲಾಗುತ್ತಿದೆ.
ಈಗ ಸರ್ಕಾರದ ಆದೇಶದಂತೆ ವಿವಿಧ ರೀತಿಯಲ್ಲಿ ಜನರಿಗೆ ನೆರವಾದ ಎನ್ಜಿಒಗಳು, ವೈಯಕ್ತಿಕ ದಾನಿಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮುಂದೆ ದಾನಿಗಳಿಗೆ ಅನುಕೂಲವಾಗಲಿದೆ. ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಮಾಸ್ಕ್ ಮತ್ತು ಸ್ಯಾನಿಟೈಸರ್ ಅವಶ್ಯಕತೆ ಇದೆ. ಈ ಬಗ್ಗೆ ದಾನ ಮಾಡುವವರು ಮಾಡಬಹುದಾಗಿದ್ದು, ಮಳಖೇಡದ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು ಸಾವಿರಾರು ಕಿಟ್ಗಳನ್ನು ನೀಡಿದ್ದಾರೆ. ಜೊತೆಗೆ ಶ್ರೀ ಸಿಮೆಂಟ್ ಮತ್ತು ವಾಸವದತ್ತಾ ಸಿಮೆಂಟ್ ಆಡಳಿತ ಮಂಡಳಿಯವರೂ ಸಹ ಜನರ ನೆರವಿಗೆ ಬರಬೇಕು ಎಂದರು.