ಕಲಬುರಗಿ: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ವಿವಾದಿತ ಪುರಾತನ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಕಲಬುರಗಿ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇದೇ ಮಹಾಶಿವರಾತ್ರಿಯಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿ 15 ಜನರಿಗೆ ಪೂಜೆಗೆ ಅವಕಾಶ ಸಿಕ್ಕಿದೆ. ಶಿವರಾತ್ರಿಯಂದೇ ದರ್ಗಾದ ಉರುಸ್ ಇರೋದ್ರಿಂದ ಉರುಸ್ಗೂ ಕೂಡ ಕೇವಲ 15 ಜನ ಮುಸ್ಲಿಮರಿಗೆ ಅನುಮತಿ ನೀಡಲಾಗಿದೆ. ಕಳೆದ ವರ್ಷ ಸಂಭವಿಸಿದ ಗಲಭೆ ಮತ್ತೆ ಮರುಕಳಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಖುದ್ದು ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿಂದು ಸುಮಾರು 500ಕ್ಕೂ ಹೆಚ್ಚು ಪೊಲೀಸರಿಂದ ಪಟ್ಟಣದ ಸುತ್ತಲೂ ಬೃಹತ್ ರೂಟ್ ಮಾರ್ಚ್ ನಡೆಸಿ ಎಚ್ಚರಿಕೆ ನೀಡಿದರು.
ಕಳೆದ ವರ್ಷ ಶಿವರಾತ್ರಿಯಂದು ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಸಿದ್ದಲಿಂಗ ಸ್ವಾಮೀಜಿಗೆ ನಿರ್ಬಂಧ ಹೇರಲಾಗಿತ್ತು. ಕೇಂದ್ರ ಸಚಿವ ಭಗವಂತ ಖೂಬಾ ಸೇರಿ ಬಿಜೆಪಿಯ ಕೆಲ ಶಾಸಕರು ಶಿವಲಿಂಗ ಪೂಜೆಗೆ ಪೊಲೀಸ್ ಭದ್ರತೆಯೊಂದಿಗೆ ದರ್ಗಾ ಪ್ರವೇಶ ಮಾಡಿದ್ದರು. ಖುದ್ದು ಎಸ್ಪಿ, ಡಿಸಿ ಸಹಿತ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ಈ ವೇಳೆ ಕಲ್ಲು ತೂರಾಟ ನಡೆದಿತ್ತು. ಈ ಬಾರಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ಅರ್ಜಿ ವಿಚಾರ ನಡೆಸಿರೋ ವಕ್ಫ್ ಬೋರ್ಡ್ ಕೋರ್ಟ್ ಬೆಳಗ್ಗೆ 8-12 ರ ವರೆಗೆ 15 ಜನ ಮುಸ್ಲಿಮರಿಗೆ ಉರುಸ್ ನಡೆಸಲು ಅವಕಾಶ ಕಲ್ಪಿಸಿದೆ. ಉರುಸ್ ಬಳಿಕ ಮಧ್ಯಾಹ್ನ 2-6 ಗಂಟೆವರೆಗೆ ಸಿದ್ದಲಿಂಗ ಸ್ವಾಮೀಜಿ ಸೇರಿ 15 ಜನರಿಗೆ ರಾಘವ ಚೈತನ್ಯ ಶಿವಲಿಂಗ ಪೂಜೆ ನಡೆಸಲು ಅವಕಾಶ ನೀಡಿದೆ. ಕಳೆದ ವರ್ಷ ಉಂಟಾದ ಗಲಭೆ ಮರುಕಳಿಸದಂತೆ ಲಾಡ್ಲೆ ಮಶಾಕ್ ದರ್ಗಾ ಸೇರಿದಂತೆ ಪಟ್ಟಣದ ಸುತ್ತಲೂ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಈಗಾಗಲೇ ಕಳೆದ ವರ್ಷ ಗಲಾಟೆಯಲ್ಲಿ ಭಾಗಿಯಾದ ಆರೋಪಿಗಳಿಂದ ಪೊಲೀಸ್ ಬಾಂಡ್ ಮೂಲಕ ಮುಚ್ಚಳಿಗೆ ಬರೆಸಿಕೊಳ್ಳಲಾಗಿದೆ. ರೌಡಿ ಶೀಟರ್ಗಳಿಗೂ ಖಡಕ್ ವಾರ್ನ್ ಮಾಡಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಯಶವಂತ ಗುರುಕರ್ ಸಮ್ಮುಖದಲ್ಲಿ ಶಾಂತಿ ಸಭೆ ಕೂಡ ಮಾಡಲಾಗಿದೆ. 1050 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 12ಕ್ಕೂ ಅಧಿಕ ಚೆಕ್ಪೋಸ್ಟ್ ನಿರ್ಮಾಣ ಮಾಡಿ ಹದ್ದಿನ ಕಣ್ಣಿಡಲಾಗಿದೆ.
ಇದನ್ನೂ ಓದಿ: ಪೊಲೀಸ್ ಭದ್ರತೆಯಲ್ಲಿ ಆಳಂದ ದರ್ಗಾದಲ್ಲಿ ಸಂದಲ್, ಶಿವಲಿಂಗ ಪೂಜೆ: ಎಸ್ಪಿ ಇಶಾ ಪಂತ್