ಕಲಬುರಗಿ:ಆಪರೇಷನ್ ಕಮಲ ನಡೆಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಅಧಿಕಾರದ ದಾಹ ಮಾತ್ರ ತೀರಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಹೊನಗುಂಟಿ ಗ್ರಾಮದಲ್ಲಿ ₹4.21 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಿತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸಂವಿಧಾನ ಬದ್ಧವಾಗಿ ಅಸ್ಥಿತ್ವಕ್ಕೆ ಬಂದಿದ್ದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ವಾಮ ಮಾರ್ಗದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಇದು ಸಂವಿಧಾನ ವಿರೋಧಿ ಧೋರಣೆ ಎಂದರು. ಬಿಜೆಪಿ ಅಭಿವೃದ್ದಿ ವಿರೋಧಿ. ಕೇವಲ ಅಧಿಕಾರದ ಆಸೆಗಾಗಿ ಹಣಕೊಟ್ಟು 17 ಜನ ಶಾಸಕರನ್ನು ಖರೀದಿ ಮಾಡಿದ್ದಾರೆ.
ತಾಂಡಾ ಏಳಿಗೆ ಬಗ್ಗೆ ಆತಂಕ ಬೇಡ: ಚಿತ್ತಾಪುರ ತಾಲೂಕಿನ ಮುಗಳನಾಗಾವಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಾನು ಸಮಾಜಕಲ್ಯಾಣ ಸಚಿವನಾಗಿಲ್ಲ. ಆದರೆ, ಶಾಸಕನಾಗಿ ಸಮಾಜಕಲ್ಯಾಣ ಇಲಾಖೆಯಲ್ಲಿ ಕೈಗೊಳ್ಳಬೇಕಾಗಿರುವ ಎಲ್ಲ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ನಿಯಮಾವಳಿಗಳನ್ನು ರೂಪಿಸಿದ್ದೇನೆ. ಈ ಕುರಿತು ಯಾವುದೇ ಆತಂಕ ಬೇಡ ಎಂದು ಭರವಸೆ ನೀಡಿದರು.