ಕಲಬುರಗಿ : ಆಳಂದ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ತಾಲೂಕಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. 70 ವರ್ಷದ ವೃದ್ಧೆಯನ್ನು ಯುವಕನೋರ್ವ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಇಲ್ಲಿನ ಆಳಂದ ತಾಲೂಕಿನ ಅಣ್ಣೂರು ಗ್ರಾಮದಲ್ಲಿ 70 ವರ್ಷದ ಮಾನಸಿಕ ಅಸ್ವಸ್ಥ ವೃದ್ದೆಯ ಮೇಲೆ ಪಕ್ಕದ ಮನೆಯ ಸಂತೋಷ (28) ಎಂಬಾತ ಅತ್ಯಾಚಾರ ಎಸಗಿದ್ದಾನೆ. ಲಾಡಮುಗುಳಿ ಗ್ರಾಮದ ಈ ಅಜ್ಜಿ, ಅಣ್ಣೂರು ಗ್ರಾಮದ ಮೊಮ್ಮಗಳ ಮನೆಯಲ್ಲಿ ವಾಸವಿದ್ದಳು. ನಿನ್ನೆ ಅಜ್ಜಿಯನ್ನು ಮನೆಯಲ್ಲಿಯೇ ಬಿಟ್ಟು ಮೊಮ್ಮಗಳು ಮನೆಗೆ ಚಿಲಕ ಹಾಕಿ ಪಕ್ಕದ ಮನೆಗೆ ಹೋಗಿದ್ದರು.
ಈ ವೇಳೆ ಚಿಲಕ ತೆಗೆದು ಒಳನುಗ್ಗಿದ ಸಂತೋಷ್, ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದೇ ವೇಳೆ ಅಜ್ಜಿಯ ಮೊಮ್ಮಗಳು ಮನೆಗೆ ಮರಳಿದ್ದು, ಮನೆ ಚಿಲಕ ತೆಗೆದಿರುವುದನ್ನು ಕಂಡಿದ್ದಾಳೆ. ಒಳಗೆ ಹೋಗಿ ನೋಡಿದರೆ ಸಂತೋಷ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ಅಜ್ಜಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಸದ್ಯ ಸಂತ್ರಸ್ತ ಅಜ್ಜಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಆರೋಪಿ ಸಂತೋಷನನ್ನು ವಶಕ್ಕೆ ಪಡೆದಿರುವ ಆಳಂದ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಇದೇ ತಾಲೂಕಿನ ಗ್ರಾಮವೊಂದರಲ್ಲಿ ಬಹಿರ್ದೆಸೆಗೆ ಹೋಗಿದ್ದ ಅಪ್ರಾಪ್ತ ಬಾಲಕಿ ಮೇಲೆ ಅದೇ ಗ್ರಾಮದ ಅಪ್ರಾಪ್ತ ಬಾಲಕನೋರ್ವ ಅತ್ಯಾಚಾರ ಎಸಗಿ ನಂತರ ಬರ್ಬರವಾಗಿ ಕೊಲೆ ಮಾಡಿದ್ದನು.
ಇದನ್ನೂ ಓದಿ : ಕಲಬುರಗಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಅಪ್ರಾಪ್ತ ಆರೋಪಿ ಅರೆಸ್ಟ್