ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಇಂದಿನಿಂದ ಸುರಿಯಲಾರಂಭಿಸಿದೆ.
ಕಲಬುರಗಿ ಜಿಲ್ಲೆಯ ಜನತೆ ಭೀಮಾ ನದಿ ಪ್ರವಾಹ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಾರಂಭದಲ್ಲಿ ದಾಖಲೆಯ ಮಳೆಯಾದ ಪರಿಣಾಮ ಜಿಲ್ಲೆಯ ಕಾಗಿಣಾ, ಭೀಮಾ ನದಿ ಸೇರಿ ಹಳ್ಳಗಳು ಉಕ್ಕಿ ಹರಿದು ನದಿ ಪಾತ್ರದ ಜನತೆ ಹಾಗೂ ರೈತರು ಅತಿವೃಷ್ಟಿಗೆ ತುತ್ತಾಗಿದ್ದರು. ಮಹಾರಾಷ್ಟ್ರದಿಂದ ಹರಿದು ಬಂದ ನೀರಿನಿಂದ ಭೀಮಾ ನದಿ ಪ್ರವಾಹಕ್ಕೆ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ತಾಲೂಕಿನ 150ಕ್ಕೂ ಅಧಿಕ ಗ್ರಾಮಗಳು ಜಲಾವೃತವಾಗಿ ನೆರೆ ಸಂಕಷ್ಟ ಬಂದೊದಗಿತ್ತು. ಇನ್ನೇನು ಪ್ರವಾಹದ ನೀರು ತಗ್ಗುವ ಹಂತಕ್ಕೆ ಬಂದಿದೆ ಎನ್ನುವಷ್ಟರಲ್ಲಿ ಮಳೆಯ ಆರ್ಭಟ ಮತ್ತೆ ಮುಂದುವರೆದಿದ್ದು, ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.
ಇತ್ತ ಹವಾಮಾನ ಇಲಾಖೆಯೂ ಸಹ ಇನ್ನೂ 4 ದಿನ ಜಿಲ್ಲೆಯಲ್ಲಿ ಮಳೆ ಸುರಿಯಲಿದೆ ಎಂಬ ಮಾಹಿತಿ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.