ಕಲಬುರಗಿ: ಲಾಕ್ಡೌನ್ ಕಾರಣದಿಂದಾಗಿ ತೋಟಗಾರಿಕೆ ಬೆಳೆಗಾರರು ತತ್ತರಿಸುವಂತಾಗಿದೆ. ಸರ್ಕಾರವೇನೋ ಕೊರೋನಾ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿಗೆ ತಂದು ಅದನ್ನು ವಿಸ್ತರಿಸುತ್ತಲೇ ಸಾಗಿದೆ. ಇದರಿಂದಾಗಿ ತೋಟಗಾರಿಕೆ ಬೆಳೆಗಾರರು ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುವಂತಾಗಿದೆ.
ಕುಂಬಳಕಾಯಿ ಬೆಳೆದ ರೈತನೂ ತೀವ್ರ ತೊಂದರೆ ಎದುರಿಸುವಂತಾಗಿದೆ. ಅಫ್ಜಲಪುರ ತಾಲೂಕಿನ ಇಂಚಗೇರಾ ಗ್ರಾಮದಲ್ಲಿ ರೈತ ಈರಣ್ಣ ಸುತಾರ ಎಂಬಾತ ಮೂರು ಎಕರೆ ಪ್ರದೇಶದಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. ಲಾಕ್ಡೌನ್ನಿಂದಾಗಿ ಮಾರುಕಟ್ಟೆಗೆ ಸಾಗಿಸಲಾಗದೆ ಕುಂಬಳಕಾಯಿ ಹೊಲದಲ್ಲಿಯೇ ಬಿದ್ದಿದೆ. ಖರೀದಿ ಮಾಡುವವರೆ ಇಲ್ಲದಂತಾಗಿದ್ದು, ದೊಡ್ಡ ದೊಡ್ಡ ಗಾತ್ರದ ಕುಂಬಳಕಾಯಿ ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ.
ಏನಿಲ್ಲವೆಂದರೂ ಕನಿಷ್ಟ 5 ಲಕ್ಷ ರೂ. ಆದಾಯ ಬರ್ತಿತ್ತು. ಆದರೆ, ಲಾಕ್ಡೌನ್ ಕಾರಣಕ್ಕೆ ಎಲ್ಲಿಯೂ ಸಾಗಿಸಲಾಗ್ತಿಲ್ಲ. ಯಾರೂ ಖರೀದಿಗೆ ಮುಂದೆ ಬರ್ತಿಲ್ಲ. ಅಧಿಕಾರಿಗಳೂ ಸಹ ಹೊಲಕ್ಕೆ ಬಂದು ಹೋಗಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಸರ್ಕಾರವೇ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಈರಣ್ಣ ಸುತಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.