ಕಲಬುರಗಿ: ಕೇಂದ್ರ ಬಿಜೆಪಿ ಸರ್ಕಾರ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ವಿಫಲವಾಗಿದೆ ಎಂದು ಕಲಬುರಗಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆಯಲ್ಲಿ ಪಕೋಡಾ ತಯಾರಿಸಿ, ಸಾರ್ವಜನಿಕರಿಗೆ ವಿತರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಸುಭಾಷ್ಚಂದ್ರ ಬೋಸ್ ಜನ್ಮ ದಿನಾಚರಣೆ ಹಿನ್ನೆಲೆ ನಗರದ ಗಂಜ್ ಪ್ರದೇಶದಲ್ಲಿರುವ ಬೋಸ್ ಪುತ್ಥಳಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಯುವ ಕಾಂಗ್ರೆಸ್, ಬೋಸ್ ಜನ್ಮ ದಿನವನ್ನು ಆಚರಿಸಿತು. ಬಳಿಕ ಅಲ್ಲಿಯೇ ರಸ್ತೆ ಬದಿಯಲ್ಲಿ ಪಕೋಡಾ ಮಾಡಿ ಸಾರ್ವಜನಿಕರಿಗೆ ವಿತರಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಆಟೋ ಮೊಬೈಲ್ ಕ್ಷೇತ್ರ ಹಾಗೂ ಇತರ ಹಲವು ಕ್ಷೇತ್ರಗಳಲ್ಲಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುವ ಬದಲಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಲು ಕೇಂದ್ರ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಈರಣ್ಣ ಜಳಕಿ ನೇತೃತ್ವದಲ್ಲಿ ನಡೆದ ವಿನೂತನ ಪ್ರತಿಭಟನೆಯಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು.