ಕಲಬುರಗಿ: ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರ ಖಂಡಿಸಿ ಹಾಗೂ ಎನ್ಆರ್ಸಿ, ಸಿಎಎ ರದ್ದತಿಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಗತ್ ವೃತ್ತದ ಬಳಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವ ನೆಪದಲ್ಲಿ ನೇರವಾಗಿ ಇಬ್ಬರು ಪ್ರತಿಭಟನಾನಿರತ ಯುವಕರ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇನ್ನು ರಾಜ್ಯ ಸರ್ಕಾರ ಪ್ರತಿಭಟನೆಯಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಬಳಿಕ ಆರ್ಎಸ್ಎಸ್ ಮುಖಂಡ ಪ್ರಭಾಕರ ಕಲ್ಲಡ್ಕ ಅವರ ಒತ್ತಾಯಕ್ಕೆ ಮಣಿದು ಪರಿಹಾರ ಹಿಂಪಡೆದಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಮತ್ತು ಎನ್ಆರ್ಸಿ ಹಾಗೂ ಸಿಎಎ ಕಾಯ್ದೆಯನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.