ಕಲಬುರಗಿ: ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಹಾಗೂ ಬಿಸಿಯೂಟ ಯೋಜನೆ ಬಲಿಷ್ಠಪಡಿಸಲು ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಅಕ್ಷರ ದಾಸೋಹ ನೌಕರರ ಸಂಘ, ಸಿಐಟಿಯುಗಳ ನೇತೃತ್ವದಲ್ಲಿ ಕಲಬುರ್ಗಿಯ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಕನ್ನಡ ಭವನದಿಂದ ಡಿಸಿ ಕಛೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಅಕ್ಷರ ದಾಸೋಹ ನೌಕರರು, ಬಿಸಿಯೂಟ ಯೋಜನೆಯನ್ನು ಬಲಿಷ್ಠಪಡಿಸುವಂತೆ ಆಗ್ರಹಿಸಿದರು.
ಈಗಿರೋ ಮಾದರಿಯನ್ನೇ ಮುಂದುವರೆಸಬೇಕು. ಕೇಂದ್ರೀಕೃತ ಅಡುಗೆ ಕೇಂದ್ರ ಮಾಡಬಾರದು. ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ನೀಡಬಾರದು. ಕೆಲಸದ ಅವಧಿಯನ್ನು ನಾಲ್ಕು ಗಂಟೆಯಿಂದ ಆರು ಗಂಟೆಗೆ ಹೆಚ್ಚಿಸಬೇಕು. ಕೊರೊನಾ ಸಂದರ್ಭದಲ್ಲಿನ ವೇತನವನ್ನು ಏಪ್ರಿಲ್ ತಿಂಗಳಿನಿಂದಲೇ ನೀಡಬೇಕು. ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಎಲ್ಲರಿಗೂ ಎಲ್.ಐ.ಸಿ. ಆಧಾರಿತ ಪಿಂಚಿಣಿ ಸೌಲಭ್ಯ ಒದಗಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.