ಕಲಬುರಗಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲಿ ಬಂಧಿಯಂತಾಗಿರುವ ಕಲ್ಯಾಣ ಕರ್ನಾಟಕದ ಕೂಲಿ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಿ ಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, ಬರ ಪೀಡಿತ ಕಲ್ಯಾಣ ಕರ್ನಾಟಕದ ಜನರು ಬೆಂಗಳೂರು, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಹೈದರಾಬಾದ್ ಮುಂತಾದ ಕಡೆ ಕೆಲಸಕ್ಕೆ ಅರಸಿ ಗುಳೆ ಹೋಗಿದ್ದು, ಪ್ರಸ್ತುತ ಕೊರೊನಾ ಸೋಂಕು ಹಬ್ಬುವ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದರಿಂದ ಕೂಲಿ ಕಾರ್ಮಿಕರು ತಾವಿರುವ ಜಾಗಗಳಲ್ಲಿ ಅನ್ನ ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ಕೂಡಲೇ ಅವರನ್ನು ತಮ್ಮ ಸ್ವಂತ ಊರುಗಳಿಗೆ ಕರೆಸಿಕೊಳ್ಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿ ಹಾಗೂ ಇಲ್ಲಿಗೆ ಬಂದ ನಂತರ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿದ ನಂತರ ಸರ್ಕಾರಿ ಶಾಲೆ, ಕಲ್ಯಾಣಮಂಟಪ ಮುಂತಾದ ಕಡೆ ಅವರಿಗೆ ಹದಿನಾಲ್ಕು ದಿನಗಳ ಕಾಲ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಖರ್ಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.