ಕಲಬುರಗಿ: ಪಶು ವೈದ್ಯರು ಹಾಗೂ ಪಶು ಆಸ್ಪತ್ರೆಗಳ ಇತರೆ ಸಿಬ್ಬಂದಿಯನ್ನು 'ಕೊರೊನಾ ವಾರಿಯರ್ಸ್' ಎಂದು ಘೋಷಿಸಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರಿಗೆ ಪತ್ರ ಬರೆದಿರುವ ಅವರು, ಕೊರೊನಾ ಭೀತಿಯ ನಡುವೆಯೂ ಗ್ರಾಮಗಳಲ್ಲಿ ರೈತರ ಮನೆ ಮನೆಗೆ ಭೇಟಿ ನೀಡಿ ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಇತರೆ ಜಾನುವಾರುಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಜೊತೆಗೆ ಪಶು ಆಸ್ಪತ್ರೆಗಳ ಇತರೆ ಸಿಬ್ಬಂದಿಯೂ ಕೂಡಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ಕರ್ತವ್ಯದಲ್ಲಿರುವಾಗಲೇ 60 ಕ್ಕೂ ಅಧಿಕ ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, 8 ಕ್ಕೂ ಹೆಚ್ಚು ನೌಕರರು ಸೋಂಕಿಗೆ ಬಲಿಯಾಗಿದ್ದಾರೆ. ಆದರೂ ಕೂಡಾ ಸರ್ಕಾರ ಇವರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಗ್ರಾಮೀಣ ಪ್ರದೇಶದ ಜನತೆ ತಮ್ಮ ಜೀವನೋಪಾಯಕ್ಕಾಗಿ ವ್ಯವಸಾಯದ ಜೊತೆಗೆ ಪಶುಪಾಲನೆಯನ್ನೂ ಅವಲಂಬಿಸಿದ್ದಾರೆ. ಗ್ರಾಮೀಣ ಭಾಗದ ರೈತರ ಆರ್ಥಿಕಾಭಿವೃದ್ಧಿಯಲ್ಲಿ ಜಾನುವಾರುಗಳು ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿವೆ. ಪಶು ವೈದ್ಯರು ಹಾಗೂ ಇತರೆ ಸಿಬ್ಬಂದಿ ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡುವ ಮೂಲಕ ರೈತರ ಜೀವನ ಮಟ್ಟವನ್ನು ಸುಧಾರಿಸಲು ಹಾಗೂ ರಾಜ್ಯದ ಪಶು ಸಂಪತ್ತನ್ನು ಕಾಪಾಡುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕು ತಾವೇ ಪರೀಕ್ಷೆ ಮಾಡಿಕೊಳ್ಳಬಹುದು, ಕೇವಲ ರೂ.250 ಮಾತ್ರ!
ರಾಜ್ಯದಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡುವುದರಲ್ಲಿ ಪಶು ವೈದ್ಯರು ಹಾಗೂ ಇತರೆ ಸಿಬ್ಬಂದಿ ಕಾರಣೀಭೂತರು. ಆದ್ದರಿಂದ ಅವರನ್ನೂ ಕೂಡಾ ಕೋವಿಡ್ ವಾರಿಯರ್ಸ್‌ಗಳೆಂದು ಪರಿಗಣಿಸಿ ಆದ್ಯತೆಯ ಮೇಲೆ ಲಸಿಕೆ ನೀಡುವುದರ ಜೊತೆಗೆ ಅವರುಗಳಿಗೆ ಅಗತ್ಯ ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕು. ಪ್ರಮುಖವಾಗಿ ಪಶು ವೈದ್ಯರು ಹಾಗೂ ಇತರೆ ಸಿಬ್ಬಂದಿಗಳಿಗೆ ಒಂದು ವೇಳೆ ಕೊರೊನಾ ಸೋಂಕು ತಗುಲಿದರೆ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.