ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ವಾರಗಿತ್ತಿಯರು ಪರಸ್ಪರ ಕಿತ್ತಾಡಿಕೊಂಡು ಮಕ್ಕಳೊಂದಿಗೆ ಇಬ್ಬರು ಬಾವಿಗೆ ಜಿಗಿದಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ದೇವಲುನಾಯಕ್ ತಾಂಡಾದಲ್ಲಿ ನಡೆದಿದೆ. ಘಟನೆಯಲ್ಲಿ ಗರ್ಭಿಣಿ ಮೃತಪಟ್ಟಿದ್ದು, ಮೃತರು ರೇಷ್ಮಾ ಚವ್ಹಾಣ್ (26) ಎಂದು ಗುರುತಿಸಲಾಗಿದೆ. ಕಲ್ಪನಾ ಚವ್ಹಾಣ್ ಹಾಗೂ ಇವರ ಇಬ್ಬರು ಮಕ್ಕಳನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಮೃತ ರೇಷ್ಮಾ ಹಾಗೂ ಕಲ್ಪನಾ ವಾರಗಿತ್ತಿಯರು (ಅಣ್ಣ ತಮ್ಮಂದಿಯರ ಪತ್ನಿಯರು). ರೇಷ್ಮಾ ಪತಿ ಮಾರುತಿ, ಕಲ್ಪನಾ ಪತಿ ಸಂತೋಷ್ ಇಬ್ಬರು ಸಹೋದರಾಗಿದ್ದು ಕುವೈತ್ನಲ್ಲಿ ಕೆಲಸ ಮಾಡ್ತಿದ್ದಾರೆ. ಸಹೋದರರ ಇಬ್ಬರು ಪತ್ನಿಯರು ಕಮಲಾಪುರದ ದೇವಲುನಾಯಕ್ ತಾಂಡಾದಲ್ಲಿ ಅತ್ತೆ-ಮಾವನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ಇಬ್ಬರೂ ಸಹೋದರರ ಪತ್ನಿಯರು ಸಂಬಂಧದಲ್ಲಿ ಅಕ್ಕ-ತಂಗಿಯಾಗಿದ್ದು, ಇವರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಕಳೆದ ಕೆಲ ದಿನಗಳಿಂದ ಗಲಾಟೆ ನಡೆಯುತ್ತಲೇ ಇತ್ತು ಎಂದು ತಿಳಿದು ಬಂದಿದೆ.
ಸಹೋದರಿಯರ ಮಧ್ಯೆ ನಿನ್ನೆ ಕೂಡಾ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ದೇವಲುನಾಯಕ್ ತಾಂಡಾ ಹೊರವಲಯದ ಬಾವಿಗೆ ಜಿಗಿದು ಗರ್ಭಿಣಿ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಷ್ಮಾ ಆತ್ಮಹತ್ಯೆಯ ಬೆನ್ನಲ್ಲೆ ಅದೆ ಬಾವಿಗೆ ಕಲ್ಪನಾ ತನ್ನ ಇಬ್ಬರು ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಲ್ಪನಾ ಮಕ್ಕಳೊಂದಿಗೆ ಬಾವಿಗೆ ಹಾರಿದ್ದನ್ನ ಗಮನಿಸಿದ ಪಕ್ಕದ ಹೊಲದವರು ತಕ್ಷಣ ಬಾವಿಗೆ ಜಿಗಿದು ತಾಯಿ ಮತ್ತು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಈ ಘಟನೆ ಬಗ್ಗೆ ಪೊಲೀಸ್ ತನಿಖೆಯಿಂದ ನಿಖರ ಮಾಹಿತಿ ತಿಳಿಯಲಿದೆ.
ಓದಿ: ಬೆಳಗಾವಿ: ವಿಷ ಸೇವಿಸಿ ಪತಿ ಆತ್ಮಹತ್ಯೆ, ಮಗು ಕೊಂದು ನೇಣಿಗೆ ಶರಣಾದ ಪತ್ನಿ