ಕಲಬುರಗಿ: ಕೊರೊನಾ ಹಿನ್ನೆಲೆ ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ಗಾಳಿಯಲ್ಲಿ ಔಷಧ ಸಿಂಪಡಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ, ಸುಳ್ಳು ಸುದ್ದಿಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್. ಬಿ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ವೈರಸ್ ಹರಡದಂತೆ ಗಾಳಿಯಲ್ಲಿ ಔಷಧ ಸಿಂಪಡಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಇಂತಹ ಗಾಳಿ ಸುದ್ದಿಗಳು ಹರಿದಾಡುತ್ತಿರುವುದು ದುರಂತ. ಯಾರು ಇಂತಹ ಗಾಳಿ ಸುದ್ದಿಗಳನ್ನು ನಂಬಬಾರದು ಮತ್ತು ಅನಗತ್ಯವಾಗಿ ಭಯಭೀತರಾಗಬಾರದು ಎಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ಧಾರೆ.
ಅಲ್ಲದೆ, ಸುಳ್ಳು ಸುದ್ದಿ ಹರಿಬಿಟ್ಟವರನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಡಿಸಿ ಎಚ್ಚರಿಕೆ ನೀಡಿದ್ದಾರೆ. ಕೆಲ ಕಿಡಿಗೇಡಿಗಳು ಕೊರೊನಾ ಭೀತಿಯನ್ನೇ ಬಂಡವಾಳ ಮಾಡಿಕೊಂಡು ಅನಗತ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹರಿಬಿಡುತ್ತಿದ್ದಾರೆ. ನಿನ್ನೆಯಷ್ಟೇ 8 ದಿನ ಪೆಟ್ರೋಲ್ ಬಂಕ್ಗಳು ಬಂದ್ ಇರಲಿವೆ ಎಂಬ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಇದರಿಂದ ರಾತ್ರೋರಾತ್ರಿ ವಾಹನ ಸವಾರರು ಪೆಟ್ರೋಲ್ ಬಂಕ್ನತ್ತ ದೌಡಾಯಿಸಿ ಪೆಟ್ರೋಲ್ ತುಂಬಿಸಿಕೊಂಡಿದ್ದರು. ಇದೀಗ ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಗಾಳಿಯಲ್ಲಿ ಔಷಧ ಸಿಂಪಡಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರಬಾರದು ಎಂದು ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಇಂತಹ ಊಹಾಪೋಹ ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದಿದ್ದಾರೆ.