ಕಲಬುರಗಿ: ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ಹೋಗುತ್ತಿಲ್ಲ. ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ವೈ ಸೆ. 17ರಂದು ದೆಹಲಿಗೆ ತೆರಳುತ್ತಿರುವುದು ಸಂಪುಟಕ್ಕೆ ಹೊಸಬರ ಸೇರ್ಪಡೆ ಅಥವಾ ಕೆಲವರನ್ನು ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಅಲ್ಲ. ಅತಿವೃಷ್ಟಿ ಬಗ್ಗೆ ಚರ್ಚಿಸಿ ಹೆಚ್ಚಿನ ಪರಿಹಾರ ತರುವುದಕ್ಕೆ ತೆರಳುತ್ತಿದ್ದಾರೆ. ಜೊತೆಗೆ ದೆಹಲಿಯಲ್ಲಿ ಕರ್ನಾಟಕ ಭವನ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ. ಸಂಪುಟಕ್ಕೆ ಹೊಸಬರ ಸೇರ್ಪಡೆ ಮತ್ತು ಕೆಲವು ಹಳಬರನ್ನು ತೆಗೆಯುವುದು ಸಿಎಂಗೆ ಬಿಟ್ಟ ವಿಚಾರ. ಸರ್ಕಾರ ರಚನೆಗೆ ಕಾರಣರಾದವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತ. ಆದರೆ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಅನುಮಾನ. ಎಲ್ಲವೂ ಸಿಎಂ ಅವರ ವಿವರಣೆಗೆ ಬಿಟ್ಟದ್ದು ಎಂದರು.
ಇನ್ನು ರಾಜ್ಯದಲ್ಲಿ ಅತಿಯಾದ ಮಳೆಯಿಂದಾಗಿ ಅತಿವೃಷ್ಟಿ ಸೃಷ್ಟಿಯಾಗಿದೆ. ರಾಜ್ಯದ 130 ತಾಲೂಕುಗಳು ಅತಿವೃಷ್ಟಿ ಪೀಡಿತ ತಾಲೂಕುಗಳು ಎಂದು ಕೇಂದ್ರಕ್ಕೆ ಪಟ್ಟಿ ಕಳಿಸಿಕೊಡಲಾಗಿದೆ. ಕೇಂದ್ರ ಸರ್ಕಾರ ಅತಿವೃಷ್ಟಿ ಪರಿಹಾರವಾಗಿ ಈಗಾಗಲೇ 395 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಹಣ ಸಾಕಾಗಲ್ಲ, ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು. ಕಲಬುರಗಿ ಸೇರಿ ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ಹೀಗಾಗಿ ಮತ್ತೊಮ್ಮೆ ಬೆಳೆ ಹಾನಿ ಸರ್ವೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.