ಕಲಬುರಗಿ: ತೊಗರಿ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಕಲಬುರಗಿ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ತೊಗರಿ ಬೆಳೆಗೆ ನೆಟೆ ರೋಗ ತೊಂದರೆ ಕೊಡುತ್ತಿದೆ. ಕಾಳು ತುಂಬಿದ ಕಾಯಿ ಸೇರಿ ಇಡೀ ತೊಗರಿ ಗಿಡ ಸಂಪೂರ್ಣ ಒಣಗಿ ನಾಶವಾಗುತ್ತಿದೆ. ರೈತರು ಸಂಕಷ್ಟ ಅನುಭವಿಸುತ್ತಿದ್ದು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಪ್ರಾರಂಭದಿಂದ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾದುದರಿಂದ ಅನ್ನದಾತ ಅಲ್ಪಾವಧಿ ಬೆಳೆ ಬಿತ್ತನೆ ಮಾಡಿದ್ದ. ನಂತರದ ದಿನಗಳಲ್ಲಿ ಎಡಬಿಡದೆ ಸುರಿದ ಮಳೆಗೆ ಬೆಳೆ ಹಾಳಾಗಿದ್ದು, ಬಿತ್ತನೆ ಮಾಡಲಾದ ತೊಗರಿ ಹಾನಿಯಾಗಿತ್ತು.
ಮಳೆ ನಿಂತಮೇಲೆ ಎರಡನೇ ಬಾರಿಗೆ ಮರುಬಿತ್ತನೆ ಮಾಡಿದಾಗ ತೊಗರಿ ಸಮೃದ್ಧವಾಗಿ ಬೆಳೆದು ನಿಂತಿತ್ತು. ಇನ್ನೇನು ಬೆಳೆ ಕೈ ಹಿಡಿಯಿತು ಅನ್ನುವಷ್ಟರಲ್ಲಿ ನೆಟೆ ರೋಗ ತಗುಲಿದೆ ಕಲಬುರಗಿ ಮಾತ್ರವಲ್ಲದೆ, ಬೀದರ್, ಯಾದಗಿರಿ ಜಿಲ್ಲೆಯಲ್ಲಿಯೂ ನೆಟೆ ರೋಗದಿಂದಾಗಿ ಬೆಳೆಗಳು ನಾಶವಾಗಿದೆ.
70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 4.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಮಳೆಯಿಂದ 1.29 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದ್ದು, 3.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆದು ನಿಂತಿತ್ತು. ಇದೀಗ ನೆಟೆ ರೋಗದಿಂದ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಒಣಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಅದರಂತೆ ನೆರೆಯ ಯಾದಗಿರಿ ಮತ್ತು ಬೀದರ್ ಜಿಲ್ಲೆಯಲ್ಲಿ ಅಂದಾಜು ತಲಾ 10 ಸಾವಿರ ಹೆಕ್ಟೇರ್‌ನಂತೆ ಒಟ್ಟು 20 ಸಾವಿರ ಹೆಕ್ಟೇರ್ ಹಾನಿಯಾಗಿದೆ. ಮೂರು ಜಿಲ್ಲೆಗಳು ಸೇರಿ ಒಟ್ಟು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ಒಣಗಿದೆ ಎಂಬುದು ಕೃಷಿ ಇಲಾಖೆಯ ಲೆಕ್ಕಾಚಾರ. ಆದರೆ ಬಹುತೇಕ ರೈತರು ಬೆಳೆದ ತೊಗರಿ ಬೆಳೆ ಹಾನಿಯಾಗಿದ್ದು, ಅಂಕಿಅಂಶ ಹೆಚ್ಚಿದೆ ಎನ್ನುವುದು ರೈತರ ಅಂದಾಜು.
ಉನ್ನತ ಮಟ್ಟದ ಸಂಶೋಧನೆಗೆ ಕೃಷಿ ಇಲಾಖೆ ಮನವಿ: ತೊಗರಿಗೆ ನೆಟೆ ರೋಗ ಅಂಟಲು ಹವಾಮಾನ ವೈಪರೀತ್ಯ ಕಾರಣ. ಮುಂಗಾರು ಹಾಗೂ ನಂತರದ ವಿಪರೀತ ಮಳೆಯಿಂದ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದೆ. ಪೂರಕ ವಾತಾವರಣ ಇಲ್ಲದ ಕಾರಣ ಸಕಾಲದಲ್ಲಿ ಕುಂಟೆ, ಎಡೆ ಹೊಡೆಯಲು ಸಾಧ್ಯವಾಗಲಿಲ್ಲ, ಹೀಗಾಗಿ ಬೇರುಗಳಿಗೆ ಅಗತ್ಯವಾದಷ್ಟು ಆಮ್ಲಜನಕ ಸಿಗದೆ ಆಳವಾಗಿ ಬೇರೂರಲು ತೊಗರಿಗೆ ಸಾಧ್ಯವಾಗಿಲ್ಲ,ಇದರಿಂದ ಬೆಳೆ ಹಾನಿಯಾಗಿದೆ ಎಂದು ಹೇಳಲಾಗಿದೆ. ಒಣಬೇರು, ಕೊಳೆರೋಗ, ಮಚ್ಚೆರೋಗ, ಮ್ಯಾಕ್ರೋಫೊಮಿನಾ, ಫೆಜಿಯೊಲೈ ಮತ್ತು ಫ್ಯುಸಾರಿಯಮ್ ರೋಗ ಏಕಕಾಲಕ್ಕೆ ಗಿಡಗಳಿಗೆ ಅಂಟಿದ ಪರಿಣಾಮ ರೋಗ ಬಾಧೆ ತಾಳದೆ ಗಿಡಗಳು ಒಣಗುತ್ತಿವೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹೀಗೆ ಆಗಿದ್ದು, ಈ ಬಗ್ಗೆ ಉನ್ನತ ಮಟ್ಟದ ಸಂಶೋಧನೆ ನಡೆಸುವಂತೆ ಕೃಷಿ ಸಚಿವರು, ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಬೆಳೆಹಾನಿ ಪರಿಹಾರಕ್ಕಾಗಿ ಸರ್ಕಾರಕ್ಕೆ ರೈತರ ಆಗ್ರಹ: ಬೆಳೆ ಕಳೆದುಕೊಂಡ ರೈತರು ಬೆಳೆ ಹಾನಿ ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ. ಅನ್ನದಾತರಿಗೆ ವಿವಿಧ ರೈತ ಪರ ಸಂಘಟನೆಗಳು, ಕಾಂಗ್ರೆಸ್ ನಾಯಕರು ಬೆಂಬಲಿಸಿ ಪ್ರತಿಭಟನೆಗಿಳಿದಿದ್ದು ರೈತರ ನೆರವಿಗೆ ಸರ್ಕಾರ ಧಾವಿಸಬೇಕಿದೆ.
ಇದನ್ನೂ ಓದಿ: ಕಲಬುರಗಿ ಡಿಸಿ ಕಚೇರಿ ಎದುರು ಪ್ರತಿಭಟಿಸಿ ಬಿಟ್ಟೋದ ಕಸ ಸ್ವಚ್ಛಗೊಳಿಸಿದ ಇನ್ಸ್ಪೆಕ್ಟರ್: ವಿಡಿಯೋ ವೈರಲ್