ಕಲಬುರಗಿ : ಮರಗುತ್ತಿ ಗ್ರಾಮದ ಸಚಿನ್ ಅಂಬಲಗಿ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಗ್ರಾ.ಪಂ ಸದಸ್ಯ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಕೊಲೆಗೆ ಪ್ರೀತಿ, ಪ್ರೇಮದ ವಿಚಾರ ಕಾರಣ ಅನ್ನೋದು ಬಯಲಾಗಿದೆ.
ನಗರದ ಹೊರವಲಯದ ಎಂ.ಎಂ ಗಾರ್ಡ್‌ನ ಹತ್ತಿರ ಡಿ.09 ರಂದು ಸಚಿನ್ ಅಂಬಲಗಿ (25) ಕೊಲೆ ನಡೆದಿತ್ತು. ಈ ಹಿನ್ನೆಲೆ ವಿವಿ ಠಾಣೆ ಪೊಲೀಸರು ಕೊಲೆ ಹಿಂದಿನ ರಹಸ್ಯ ಬಯಲಿಗೆಳೆದು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತನ ಊರಿನವರೇ ಆದ ಗ್ರಾ.ಪಂ. ಸದಸ್ಯ ಸಿದ್ದು ಪೂಜಾರಿ ಮತ್ತು ಆತನ ಸ್ನೇಹಿತರಾದ, ಇಕ್ಬಾಲ್ ಮತ್ತು ಆಸೀಪ್‌ನನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ನಗರದ ಖಾಸಗಿ ಬ್ಯಾಂಕ್ನಲ್ಲಿ ಲೋನ್ ರಿಕವರಿ ಕೆಲಸ ಮಾಡುತ್ತಿದ್ದ ಸಚಿನ್, ಕೊಲೆ ಆರೋಪಿಯಾದ ಸಿದ್ದು ಪೂಜಾರಿ ಕುಟುಂಬದ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಅಲ್ಲದೆ ಯುವತಿ ಜೊತೆಗೆ ತಾನು ಇರೋ ಫೋಟೋಗಳನ್ನು ಅನೇಕರಿಗೆ ಆಗಾಗ ತೋರಿಸುತ್ತಿದ್ದನಂತೆ. ಹೀಗಾಗಿ ಯುವತಿ ಕುಟುಂಬಸ್ಥರು ಈ ಮುಂಚೆ ಎಚ್ಚರಿಕೆ ಕೊಟ್ಟಿದ್ದರು ಕೂಡ ಸಚಿನ್ ತನ್ನ ಚಾಳಿ ಬಿಟ್ಟಿರಲಿಲ್ಲವಂತೆ.
ಡಿಸೆಂಬರ್ 9 ರಂದು ಮತ್ತೆ ಸಂಜೆ ಸ್ನೇಹಿತರ ಜೊತೆಗೆ ಹೋಟೆಲ್‌ನಲ್ಲಿ ಇದ್ದಾಗ ಯುವತಿ ಜೊತೆ ಇರೋ ಫೋಟೋಗಳನ್ನು ಕೆಲವರಿಗೆ ತೋರಿಸುವುದನ್ನು ಸಿದ್ದು ಪೂಜಾರಿ ಗಮನಿಸಿದ್ದಾನೆ. ಇದರಿಂದ ರೊಚ್ವಿಗೆದ್ದ ಸಿದ್ದು ಪೂಜಾರಿ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಪಾರ್ಟಿ ಮುಗಿಸಿ ಬರುವಾಗ ಸಚಿನ್ ತಡೆದು ಪಕ್ಕದ ಗಾರ್ಡನ್ಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದರು.
ಇದನ್ನೂ ಓದಿ :ಕಲಬುರಗಿಯಲ್ಲಿ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ