ಕಲಬುರಗಿ: ಬೀದಿಗೆ ಬಂದ್ರೆ ನೀನು ನಿನ್ನ ಮನೆಗೆ ಬರುವೆ ನಾನು. ಹೀಗೆ ಮಹಾಮಾರಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು ವಾಡಿ ಪುರಸಭೆ ಅಧಿಕಾರಿಗಳು ವಿಭಿನ್ನವಾದ ಬಹಗಳನ್ನು ಬರೆಸುವ ಮೂಲಕ ಜನರನ್ನು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು,ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ. ಆದರೂ ಜನ ಅನಗತ್ಯವಾಗಿ ತಿರುಗಾಡುತ್ತಿರುವುದು ಪೋಲಿಸರು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನು ತಡೆಯಲು ವಾಡಿ ಪುರಸಭೆ ಅಧಿಕಾರಿಗಳು ವಿಭಿನ್ನವಾಗಿ ರಸ್ತೆ ಮೇಲೆ "ಬೀದಿಗೆ ಬಂದ್ರೆ ನೀನು ನಿನ್ನ ಮನೆಗೆ ಬರುವೆ ನಾನು..! ಎಂದು ಚಿತ್ರಕಲಾವಿದರಿಂದ ಎಚ್ಚರಿಕೆ ಬರಹವನ್ನು ಬರೆಸುವ ಮೂಲಕ ಗಮನ ಸೆಳೆದಿದ್ದಾರೆ.
ಒಂದು ವೇಳೆ ನೀವು ಮನೆಯಿಂದ ಹೊರಗಡೆ ಬಂದ್ರೆ ನಿಮ್ಮ ಮೂಲಕ ವೈರಸ್ ನಿಮ್ಮ ಮನೆಗೆ ಬಂದು ಇಡಿ ಕುಟುಂಬಕ್ಕೆ ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ ಅನಗತ್ಯವಾಗಿ ಯಾರು ಮನೆಯಿಂದ ಹೊರಗೆ ಬರಬೇಡಿ. ಒಂದು ವೇಳೆ ಹೊರಬರುವ ಅನಿವಾರ್ಯ ಸೃಷ್ಟಿಯಾದರೆ ಮುಖಕ್ಕೆ ಮಾಸ್ಕ್ ಧರಿಸಿ ಹೊರಗಡೆ ಬರುವಂತೆ ಪುರಸಭೆ ಮುಖ್ಯಧಿಕಾರಿ ವಿಠ್ಠಲ ಹಾದಿಮನಿ ತಿಳಿಸಿದ್ದಾರೆ.