ಕಲಬುರಗಿ: ಕೃಷಿ ಸಚಿವರ ವಾಹನಕ್ಕೆ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಸಚಿವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂಸದ ಉಮೇಶ್ ಜಾಧವ್ಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಕಲಬುರಗಿ ನಗರದ ರಾಮ ಮಂದಿರ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ಜಾಧವ್ ಎಡಗೈ ಮೂಳೆಗೆ ಪೆಟ್ಟು ಬಿದ್ದಿದ್ದು ಅಪಾಯದಿಂದ ಪಾರಾಗಿದ್ದಾರೆ. ಸಂಸದರು ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಹಾಗೂ ಬೀದರ್ ಸಂಸದ ಭಗವಂತ ಖೂಬಾ, ಸಂಸದ ಉಮೇಶ್ ಜಾಧವ್ ಅವರಿಗೆ ಅಪಘಾತವಾಗಿರುವುದು ಕೇಳಿ ನನಗೆ ತೀವ್ರ ನೋವಾಗಿದೆ. ಜಾಧವ್ ಅವರು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದಾರೆ.