ಕಲಬುರಗಿ: ಪ್ರಧಾನಿ ಮೋದಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಪ್ರಜಾಪ್ರಭುತ್ವ ಉಳಿಯಲ್ಲ, ಸಂವಿಧಾನ ಉಳಿಸಲು ಜನ ಜಾಗೃತರಾಗಬೇಕಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಯಾವ ಪ್ರಧಾನಿ ಕೂಡ ತಿಂಗಳುಗಟ್ಟಲೇ ಚುನಾವಣಾ ಪ್ರಚಾರ ಮಾಡಿಲ್ಲ, ಆದರೆ ಮೋದಿ ತಿಂಗಳುಗಟ್ಟಲೇ ಚುನಾವಣಾ ಪ್ರಚಾರ ಮಾಡಿದ್ದಾರೆ. ಹೀಗೆ ಅಧಿಕಾರ ದುರುಪಯೋಗ ಮಾಡುತ್ತಾ ಹೋದ್ರೆ ಪ್ರಜಾಪ್ರಭುತ್ವ ಹೇಗೆ ಉಳಿಯುತ್ತೆ?, ಧರ್ಮ, ಹಣ, ವ್ಯಕ್ತಿ ಪೂಜೆ ಮಾಡುವುದರಿಂದ ನಿಷ್ಪಕ್ಷಪಾತ ಚುನಾವಣೆ ನೀರಿಕ್ಷಿಸಲು ಸಾಧ್ಯವಿಲ್ಲ ಅಂತ ವಾಗ್ದಾಳಿ ನಡೆಸಿದರು.
ಪಂಚರಾಜ್ಯ ಚುನಾವಣೆಯಲ್ಲಿ ಸೋಲು: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಜನ ಬೆಂಬಲ ನಮಗೆ ಸಿಕ್ಕಿಲ್ಲ, ಅಲ್ಲಿನ ಸರ್ಕಾರ ಕೆಡವಿದ್ದಾರೆ. ಈ ಹಿಂದೆ ನಮಗೆ ಅಧಿಕಾರ ಸಿಕ್ಕ ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುವ ಮೂಲಕ ಬಿಜೆಪಿಯವರು ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇನ್ನು ರಾಜ್ಯ ಕಾಂಗ್ರೆಸ್ನಲ್ಲಿ ಒಳ ಜಗಳವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷ ಸರಿಯಾದ ರೀತಿಯಲ್ಲಿ ಕೆಲಸ ಮಾಡ್ತಿದೆ. ಮುಂದಿನ ದಿನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಗುಜರಾತ್ ರಾಜ್ಯದಲ್ಲಿ ಭಗವದ್ಗೀತೆ ಕಡ್ಡಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖರ್ಗೆ, ಆ ಬಗ್ಗೆ ನಾನು ಇಲ್ಲಿ ಮಾತನಾಡಲ್ಲ, ಪಾರ್ಲಿಮೆಂಟ್ನಲ್ಲಿ ಮಾತನಾಡುತ್ತೇನೆ ಎಂದರು.
ಒಳ್ಳೆಯದಾದ್ರೆ ನಂದು, ಕೆಟ್ಟದಾದ್ರೆ ನಿಂದು: ಗಾಂಧಿ ಕುಟುಂಬದವರ ಬಗ್ಗೆ ಮಾತನಾಡಿದ ಸ್ವಪಕ್ಷದ ನಾಯಕರಿಗೆ ತಿರುಗೇಟು ನೀಡಿದ ಖರ್ಗೆ, ಮೊನ್ನೆವರೆಗೆ ಸೋನಿಯಾ ಗಾಂಧಿ ಅವರನ್ನು ಹೊಗಳುತ್ತಿದ್ದರು. ಗೆದ್ದಾಗ ಇದೇ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಕೊಂಡಾಡಿದ್ರು. ಕೆಲ ಜನರಿಗೆ ಅಧಿಕಾರ ಮಾತ್ರ ಬೇಕು. ಇದೇ ನಾಯಕರೇ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಕರೆತಂದಿದ್ದು, ಇದೀಗ ಅವರೇ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ ಅಂತಾ ಕೆಂಡಾಮಂಡಲರಾದರು.
ಇಂದಿರಾಗಾಂಧಿ, ರಾಜೀವ್ ಗಾಂಧಿ ಗುಂಡಿಗೆ ಬಲಿಯಾಗಿದ್ದಾರೆ. ಪಕ್ಷದ ಮೇಲೆ ಅಭಿಮಾನ ಇರೋರು ಈ ರೀತಿ ಮಾತನಾಡುವುದು ಸರಿಯಲ್ಲ. ಸಿಡಬ್ಲ್ಯೂಸಿ ಸಭೆಯಲ್ಲಿ ಇವರಾರೂ ಮಾತನಾಡಲ್ಲ. ಹೊರಗಡೆ ಮಾತ್ರ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಒಳ್ಳೆಯದಾಯ್ತು ಅಂದ್ರೆ ನಂದು, ಕೆಟ್ಟದಾಯ್ತು ಅಂದ್ರೆ ನಿಂದು ಅನ್ನೋರಿದ್ದಾರೆ ಅಂತಾ ಗುಡುಗಿದರು.
ಇದನ್ನೂ ಓದಿ: ಉಕ್ರೇನ್ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 21 ಸಾವು, 25ಕ್ಕೂ ಅಧಿಕ ಮಂದಿ ಗಾಯ