ಕಲಬುರಗಿ: ಕೊರೋನಾ ವೈರಸ್ನಿಂದಾಗಿ ರೈತರು ಕಂಗಾಲಾಗಿದ್ದು, ಅವರು ಬೆಳೆದ ಬೆಳೆ, ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸುವಂತೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಟ್ಟಣದ ತಹಶೀಲ್ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಅವರು ಮಾತನಾಡಿದರು.
ರೈತರು ಸಂಕಷ್ಟ ಎದುರಿಸಿದರೆ ಇಡೀ ದೇಶವೇ ತೊಂದರೆಗೆ ಸಿಲುಕಬಹುದು. ಅದಕ್ಕಾಗಿ ಅವರಿಗೆ ಸೌಕರ್ಯ ಕಲ್ಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಮತ್ತು ತೇಲ್ಕೂರ ಪಾಟೀಲ ಫೌಂಡೇಷನ್ ವತಿಯಿಂದ ಈಗಾಗಲೇ ಅನೇಕ ಕಡೆಗಳಲ್ಲಿ ಆಹಾರ, ದಿನಸಿ ಮತ್ತು ಹಾಲನ್ನು ವಿತರಿಸಲಾಗುತ್ತಿದೆ. ಲಾಕ್ ಡೌನ್ ಪೂರ್ಣಗೊಳ್ಳುವವರೆಗೂ ಬಡವರು ಉಪವಾಸ ಮಲಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಬಡವರಿಗೆ ಧವಸ ಧಾನ್ಯಗಳ ಕಿಟ್ ಮತ್ತು ಹಾಲಿನ ಪ್ಯಾಕೆಟ್ಗಳನ್ನು ವಿತರಿಸಲಾಯಿತು. ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಚಂದಮ್ಮ ಅಂಬಲಗಿ ಹಾಗೂ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.