ಕಲಬುರಗಿ: ಸರ್ಕಾರದ ನಡೆ ಮತ್ತು ನುಡಿ ನೋಡಿದರೆ ಕಳೆದ ವರ್ಷದ ಕೊರೊನಾದಿಂದಲೂ ಸರ್ಕಾರ ಪಾಠ ಕಲಿತಂತೆ ಕಾಣುತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಕೊರೊನಾ ಎರಡನೇ ಅಲೆಯ ಆತಂಕ ಹೆಚ್ಚಾಗಿದೆ. ರೋಗವನ್ನು ಹತೋಟಿಗೆ ತರಬೇಕಾದ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಇದನ್ನೆಲ್ಲ ಗಮನಿಸಿದರೆ ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಪಾಠ ಕಲಿತಿಲ್ಲ ಎಂದೆನಿಸುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಎರಡು ಸಾವಿರ ಜನರಿಗೆ ಸೋಂಕು ತಗುಲಿದೆ, 24 ಜನ ಸಾವಿಗೀಡಾಗಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಸೋಂಕಿತರಿಗೆ ಚಿಕಿತ್ಸೆ ಕೊಡಲು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲ. ರೆಮಿಡಿಸಿವರ್ ಇಂಜೆಕ್ಷನ್, ಬೆಡ್‌ಗಳ ಕೊರತೆ ಇದೆ. ಹಾಗಾದ್ರೆ ಈ ಸರ್ಕಾರ ಮಾಡುವುದೇನು ಎಂದು ಪ್ರಶ್ನಿಸಿದರು.
ಆಳಂದ ಸೇರಿದಂತೆ ಮಹಾರಾಷ್ಟ್ರ ಗಡಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಚೆಕ್ ಪೋಸ್ಟ್ಗಳಲ್ಲೂ ಭ್ರಷ್ಟಾಚಾರ ನಡೆಯಲು ಸರ್ಕಾರ ಬಿಡುವುದೇಕೆ?, ಕೋವಿಡ್ ಹೆಸರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸುಲಿಗೆ ನಡೆದಿದೆ ಎಂದು ಅವರು ದೂರಿದರು.
ಲಾಕ್‌ಡೌನ್ ಮಾಡೋ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಲಿಲ್ಲ. ಅನ್‌ಲಾಕ್ ಮಾಡೋ ಸಂದರ್ಭದಲ್ಲಿ ಲಾಕ್ ಡೌನ್ ಮಾಡಿದರು. ಹೀಗಾಗಿ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಕಳೆದ ವರ್ಷ ಹೆಣದ ಮೇಲೆ ಸರ್ಕಾರ ಹಣ ಹೊಡೆದಿದೆ ಎಂದು ಪ್ರಿಯಾಂಕ ಖರ್ಗೆ ಕಿಡಿಕಾರಿದರು.
ಇದನ್ನೂಓದಿ: ರಾಜ್ಯದ 8 ನಗರಗಳಲ್ಲಿ ಕೊರೊನಾ ಕರ್ಫ್ಯೂ ಏಪ್ರಿಲ್ 20 ರವರೆಗೂ ವಿಸ್ತರಣೆ