ಕಲಬುರ್ಗಿ : ಅಕ್ರಮ ಮರಳುಗಾರಿಕೆಗೆ ಅನುಮತಿ ನೀಡುವಂತೆ ಕೇಳಿದ ವ್ಯಕ್ತಿಯನ್ನ ಶಾಸಕ ಪ್ರಿಯಾಂಕ್ ಖರ್ಗೆ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಚಿತ್ತಾಪುರ ಕ್ಷೇತ್ರದ ಹೊನಗುಂಟಿ ಗ್ರಾಮದ ವ್ಯಕ್ತಿಯೋರ್ವ, ಶಾಸಕ ಪ್ರೀಯಾಂಕ್ ಖರ್ಗೆ ಅವರಿಗೆ ಮೊಬೈಲ್ ಕರೆ ಮಾಡಿ ಅಕ್ರಮ ಮರಳುಗಾರಿಕೆಗೆ ಅನುಮತಿ ನೀಡುವಂತೆ ಕೇಳಿಕೊಂಡಿದ್ದಾನೆ. ನಮ್ಮ ಗ್ರಾಮದ ಸುಮಾರು ಜನರು ಅಕ್ರಮ ಮರಳುಸಾಗಾಟದ ಮೇಲೆ ಬದುಕು ನಡೆಸುತ್ತಿದ್ದೇವೆ. ಆದರೆ, ಪೊಲೀಸರು ಮರಳು ಸಾಗಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಮಗೆ ಹೇಗಾದರೂ ಮಾಡಿ ಮರಳು ಸಾಗಾಟಕ್ಕೆ ಅನುಮತಿ ಕೊಡಿಸಿ ಎಂದು ಮನವಿ ಮಾಡಿದ್ದಾನೆ.
ವ್ಯಕ್ತಿಯ ಮಾತಿನಿಂದ ಕೆಂಡಾಮಂಡಲರಾದ ಶಾಸಕ ಖರ್ಗೆ, ನಿನಗೆ ಏನಾದ್ರೂ ಬುದ್ಧಿ ಇದ್ಯೇನಪ್ಪಾ? ಅಕ್ರಮ ಮರಳು ಸಾಗಾಟಕ್ಕೆ ಹತ್ತು ಸಲ ಫೋನ್ ಮಾಡ್ತೀಯಾ? ಕೊರೊನಾದಂತಹ ಮಾರಕ ಕಾಯಿಲೆಯಿಂದ ಜನ ಸಾಯುತ್ತಿದ್ದಾರೆ. ನಿಮಗೆ ಅಕ್ರಮ ಮರಳು ದಂಧೆ ಚಿಂತೆನಾ? ನಾನು ಸೋತ್ರೂ ಪರವಾಗಿಲ್ಲ. ಅಕ್ರಮ ದಂಧೆಗಳಿಗೆ ಅನುವು ಮಾಡಿಕೊಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ವೋಟು ಹಾಕೋದಿಲ್ಲ ಅಂತಾ ಹೆದರಿಸುತ್ತೀರಾ? ನನಗೆ ನಿಮ್ಮ ವೋಟು ಬೇಡ, ನೀವು ಬೇಡ. ನೀವು ಮರಳು ಸಾಗಾಟ ಹೇಗೆ ಮಾಡ್ತಿರೋ ನಾನು ನೋಡ್ತಿನಿ. ಮರಳು ಸಾಗಾಟ ಮಾಡಿ ತೋರಿಸಿ, ನಿಮ್ಮನ್ನ ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.