ಸೇಡಂ : ಕೊರೊನಾ ಮಹಾಮಾರಿ ತಡೆಯುವ ನಿಟ್ಟಿನಲ್ಲಿ ಶ್ರಮಿಸಿದವರ ಪೈಕಿ ಖಾಸಗಿ ವೈದ್ಯರ ಪಾಲು ಹೆಚ್ಚಿನದ್ದಾಗಿದೆ. ಅವರ ಸೇವೆಯನ್ನು ಮರೆತು ಕೊರೊನಾ ಹೆಸರಲ್ಲಿ ಅವಮಾನ ಮಾಡುವುದು ಸರಿಯಲ್ಲ ಎಂದು ಖಾಸಗಿ ವೈದ್ಯರ ಸಂಘದ ಉಪಾಧ್ಯಕ್ಷ ಡಾ. ರಾಜಕುಮಾರ ಬಿರಾದಾರ ಹೇಳಿದ್ದಾರೆ.
ನಿಸರ್ಗ ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಸ್ಥಳೀಯ ಖಾಸಗಿ ವೈದ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ, ಅವರನ್ನು ಮತ್ತು ಅವರ ಕುಟುಂಬಸ್ಥರನ್ನು ಅನೇಕರು ಸೋಂಕಿತರಂತೆ ಕಾಣುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅವರ ಕುಟುಂಬದ ಹೆಸರು ಬಳಸಲಾಗುತ್ತಿದೆ. ಇದರಿಂದ ಅವರ ಕುಟುಂಬದ ಸದಸ್ಯರಿಗೆ ಮಾನಸಿಕವಾಗಿ ತೊಂದರೆಯಾಗುತ್ತದೆ. ಈ ರೀತಿಯ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಖಾಸಗಿ ವೈದ್ಯರ ಸೇವೆಯಿಂದ ಬಹುಪಾಲು ಕೊರೊನಾ ಪ್ರಕರಣ ಕಡಿಮೆಯಾಗಿವೆ. ಅದಲ್ಲದೆ ಕ್ವಾರಂಟೈನ್‌ನಲ್ಲಿರುವ ವೈದ್ಯರ, ಪ್ರಥಮ ಹಂತದ ತಪಾಸಣೆ ವರದಿ ನೆಗೆಟಿವ್ ಬಂದಿದೆ.
ಜನ ಕೊರೊನಾ ವಿರುದ್ಧ ಹೋರಾಡಬೇಕೆ ಹೊರತು ಕೊರೊನಾ ಸೋಂಕಿತ ಅಥವಾ ಶಂಕಿತನ ವಿರುದ್ಧವಲ್ಲ ಎಂದರು.