ಕಲಬುರಗಿ : ಭಾರತ ಲಾಕ್‌ಡೌನ್ ಆದಾಗಿನಿಂದ ಜಿಲ್ಲೆಯಲ್ಲಿ ಕೇವಲ ಜನರಲ್ಲದೇ ಆಹಾರ-ನೀರಿಗಾಗಿ ಬಿಡಾಡಿ ಜಾನುವಾರುಗಳು, ಶ್ವಾನಗಳು, ಪ್ರಾಣಿ-ಪಕ್ಷಿಗಳು ಪರಿತಪಿಸುವಂತಾಗಿದೆ. ಇಂತಹ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸುವ ಪುಣ್ಯದ ಕೆಲಸ ಕಲಬುರಗಿಯ ನಂದಿ ಎನಿಮಲ್ ವೆಲ್‌ಫೇರ್ ಸೊಸೈಟಿ ಸಿಬ್ಬಂದಿ ಮಾಡ್ತಿದ್ದಾರೆ.
ಕಲ್ಯಾಣ ಮಂಟಪ, ಹೋಟೆಲ್ಗಳಲ್ಲಿ ಅಳಿದುಳಿದ ಮುಸುರೆ ತಿಂದು ಬದುಕುತ್ತಿದ್ದ ಬಿಡಾಡಿ ದನಗಳ ಪಾಡಂತೂ ಹೇಳತೀರದಂತಾಗಿದೆ. ನಗರದಲ್ಲಿ ಸರಿ ಸುಮಾರು ಏಳರಿಂದ ಎಂಟನೂರು ಬಿಡಾಡಿ ದನಗಳಿದ್ದು, ಒಂದೊತ್ತಿನ ಆಹಾರಕ್ಕೂ ಪರದಾಡುತ್ತಿವೆ. ಹೀಗಾಗಿ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸುವ ಪುಣ್ಯದ ಕೆಲಸ ನಗರದ ನಂದಿ ಎನಿಮಲ್ ವೆಲ್‌ಫೇರ್ ಸೊಸೈಟಿ ಸಿಬ್ಬಂದಿ ಮಾಡ್ತಿದ್ದಾರೆ.
ಹೋಲ್ಸೇಲ್ನಲ್ಲಿ ತರಕಾರಿ, ರೊಟ್ಟಿ ಖರೀದಿಸಿ ಜಾನುವಾರುಗಳ ಹೊಟ್ಟೆ ತುಂಬಿಸುತ್ತಿದ್ದಾರೆ. ಅನ್ನದ ಜೊತೆಗೆ ಸಾಂಬಾರ ಸೇರಿಸಿ ಮುಸರೆ ಮಾದರಿಯಲ್ಲಿ ತಯಾರಿಸಿ ನಂದಿ ಎನಿಮಲ್ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಕೇಶವ ಮೊಟಗಿ ನೇತೃತ್ವದ ತಂಡ ಸರಬರಾಜು ಮಾಡಲಾಗುತ್ತಿದೆ.
ಆಹಾರ ವಿತರಣೆಗಾಗಿ ನಗರದಲ್ಲಿ 21 ಸ್ಥಳಗಳನ್ನು ಗುರುತಿಸಿ, 6 ಜನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 21 ಸ್ಥಳದಲ್ಲಿ ನೀರಿಗಾಗಿ ಅರವಟಿಗೆ ಇಡಲಾಗಿದ್ದು, ನಿತ್ಯ ಎರಡು ಬಾರಿ ಅರವಟಿಗೆಯಲ್ಲಿ ನೀರು ತುಂಬಿಸಿ ಜಾನುವಾರು ಪ್ರಾಣಿ- ಪಕ್ಷಿಗಳ ದಾಹ ತೀರಿಸುತ್ತಿದ್ದಾರೆ.