ಕಲಬುರಗಿ: ಕಾರ್ಮಿಕ ವರ್ಗ ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಅಗತ್ಯ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದರು.
ಲಾಕ್ಡೌನ್ ಹಿನ್ನೆಲೆ ಕಾರ್ಮಿಕ ದಿನಾಚರಣೆಯನ್ನು ಕುಟುಂಬದವರೊಂದಿಗೆ ತಮ್ಮ ಕೆ.ಹೆಚ್.ಬಿ. ಕಾಲೋನಿ ನಿವಾಸದ ಎದುರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಪೌರಕಾರ್ಮಿಕರಿಂದ ಹಿಡಿದು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರು, ದಿನಗೂಲಿಗಳ ಜೀವನ ಸಂಕಷ್ಟದಲ್ಲಿದೆ. ಕೇಂದ್ರ ಸರ್ಕಾರ ಉಳ್ಳವರ ಸಾಲ ಮನ್ನಾ ಮಾಡಲು ಮುಂದಾಗಿದೆ. ಸರ್ಕಾರ ಅಂಬಾನಿ, ಅದಾನಿಗಳ ಸಾಲ ಮನ್ನಾ ಮಾಡಿ, ಬಂಡವಾಳಶಾಹಿಗಳ ಪರವಾದ ಸರ್ಕಾರ ಎಂದು ಸಾಬೀತು ಮಾಡಿದೆ ಎಂದು ಆರೋಪಿಸಿದರು.
ಕೂಡಲೇ ಕಾರ್ಮಿಕರು, ರೈತರಿಗೆ ಸರ್ಕಾರದಿಂದ ಸಹಾಯ ಹಸ್ತ ಚಾಚಬೇಕೆಂದು ಒತ್ತಾಯಿಸಿದರು. ಕೇರಳ ಮಾದರಿಯಲ್ಲಿ ಕೊರೊನಾ ನಿಯಂತ್ರಿಸಿ. ಕೊರೊನಾದಿಂದ ದುಡಿಯುವ ವರ್ಗ ಸಂಕಷ್ಟದಲ್ಲಿದ್ದು, ಕೇರಳ ಮಾದರಿಯಲ್ಲಿ 40 ಕೆಜಿ ಅಕ್ಕಿ, 3 ಕೆಜಿ ಬೇಳೆ, ಸಕ್ಕರೆ ಇತ್ಯಾದಿಗಳನ್ನು ಒದಗಿಸುವುದರ ಜೊತೆಗೆ ಕೇರಳ ಮಾದರಿಯಲ್ಲಿ ಸೋಂಕಿನ ವಿರುದ್ಧ ಹೋರಾಡಿ, ನಿಯಂತ್ರಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಮನವಿ ಮಾಡಿದರು.