ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ನ್ಯಾಯವಾದಿ ಹಣಮಂತ ಯಳಸಂಗಿ ಆರೋಪಿಸಿದ್ದಾರೆ.
ಕಾರಾಗೃಹದಲ್ಲಿ ಅಪರಾಧಿಗಳು ಬುದ್ದಿ ಕಲಿತು ಹೋರ ಹೋಗುವಂತಾಗಬೇಕು. ಆದರೆ ಇಲ್ಲಿನ ಕಾರಾಗೃಹ ಕೈದಿಗಳಿಗೆ ಸ್ವರ್ಗವಾಗಿ ಮಾರ್ಪಟ್ಟಿದೆ. ಒಳಗಿದ್ದವರಿಗೆ ಗಾಂಜಾ ಸರಬರಾಜು ಆಗುತ್ತಿದೆ. ಇದಕ್ಕೆ ಸ್ವತಾ ಜೈಲಿನ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ಸಿಸಿ ಕ್ಯಾಮೆರಾ ಇದ್ದರೂ ಸಹ ಭಯಪಡದೆ ರಾಜಾರೋಷವಾಗಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ. ಜೈಲ್ ಒಳಗೆ ಥಂಬ್ಸ್ ಅಪ್ ಬಾಟಲಿಯಲ್ಲಿ ರಮ್ ಸಪ್ಲೆಯಾಗುತ್ತಿದೆ. ಬಿಸ್ಲರಿ ಬಾಟಲಿಯಲ್ಲಿ ಜಿನ್ ಸಪ್ಲೆ ಮಾಡಲಾಗುತ್ತಿದೆ. ಕಾರಾಗೃಹ ಅಕ್ರಮ ಚಟುವಳಿಕೆಗಳ ತಾಣವಾಗುತ್ತಿದೆ, ತಕ್ಷಣ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯುವಂತೆ ಆಗ್ರಹಿಸಿದರು.
ಘಟನೆ ಸಂಭಂದಿಸಿದಂತೆ ಕಲಬುರಗಿ ಪೋಲಿಸ್ ಕಮಿಷನರ್ ಹಾಗೂ ಎಡಿಜಿಪಿ ಅವರಿಗೆ ದೂರು ನೀಡುವುದಾಗಿ ಹೇಳಿದ ಅವರು, ಈ ಭಾಗದ ಜನಪ್ರತಿನಿಧಿಗಳು ಮುಂಗಾರು ಅಧಿವೇಶನದಲ್ಲಿ ಗಾಂಜಾ ಪ್ರಕರಣದ ಕುರಿತು ಧ್ವನಿ ಎತ್ತುವ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಒತ್ತಾಯಿಸಿದರು.