ಕಲಬುರಗಿ: ಮಹಾಮಾರಿ ಕೊರೊನಾದಿಂದ ದೇಶದ ಜನ ಸಂಕಷ್ಟದಲ್ಲಿರುವ ಕಾರಣ ಹಾಗೂ ಲಾಕ್ಡೌನ್ ಜಾರಿ ಇರುವುದರಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊರೊನಾದಿಂದಾಗಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ದೇಶದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೊನಾ ಪೀಡಿತರು ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸೂಕ್ತವಲ್ಲ.
ಬರುವ 21ರಂದು ಜನ್ಮದಿನ ಇದ್ದು, ಬೆಂಗಳೂರಿನಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸಬಾರದೆಂದು ತಮ್ಮ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನದಂದು ತಮ್ಮ ಸುತ್ತಲಿನ ಬಡಜನರಿಗೆ, ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ನೆರವಾಗುವಂತೆ ಕರೆ ಕೊಟ್ಟಿದ್ದಾರೆ.
ಪ್ರತಿ ವರ್ಷ ಹುಟ್ಟುಹಬ್ಬದ ದಿನದಂದು ಬೆಂಗಳೂರಿನ ತಮ್ಮ ಸದಾಶಿವನಗರ ನಿವಾಸದಲ್ಲಿ ಅವರ ಅಭಿಮಾನಿಗಳು ಸಡಗರ-ಸಂಭ್ರಮದಿಂದ ಖರ್ಗೆ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಲಾಕ್ಡೌನ್ ಇರುವುದರಿಂದ ಹುಟ್ಟುಹಬ್ಬ ಆಚರಿಸದಿರುವಂತೆ ಖರ್ಗೆಯವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.