ಕಲಬುರಗಿ : ಸೇವಾ ಉದ್ಯೋಗಾಕಾಂಕ್ಷಿಗಳಿಗೆ ಟ್ರೈನಿಂಗ್ ಕೊಟ್ಟು ನಾಲ್ಕು ವರ್ಷದಲ್ಲಿ ಅವರನ್ನು ನಿವೃತ್ತಿಗೊಳಿಸಿದರೆ ಯಾವ ಸೈನಿಕ ಕೂಡ ವೆಲ್ ಟ್ರೈನ್ಡ್ ಆಗಿ ಹೊರ ಬರೋದಿಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಕುರಿತು ಪ್ರತಿಕ್ರಿಯೆ ನೀಡಿದರು. ರಕ್ಷಣಾ ಇಲಾಖೆಯಲ್ಲಿ ಗುತ್ತಿಗೆ, ದಿನಗೂಲಿ ಆಧಾರದ ಮೇಲೆ ತೆಗೆದುಕೊಳ್ಳೋದು ಸರಿಯಲ್ಲ. ರಕ್ಷಣಾ ಇಲಾಖೆಯ ಬಗ್ಗೆ ಉದ್ಯೋಗಾಕಾಂಕ್ಷಿಗಳಿಗೆ ತಿಳಿದುಕೊಳ್ಳಲು ಸಾಕಷ್ಟು ವರ್ಷ ಬೇಕು. ನೀವು ಕೇವಲ ನಾಲ್ಕೇ ವರ್ಷಕ್ಕೆ ಮನೆಗೆ ಹೋಗಿ ಅಂದ್ರೆ ಹೇಗಾಗುತ್ತೆ?ಎಂದು ಪ್ರಶ್ನಿಸಿದರು.
ಸೇನೆಗೆ ಭರ್ತಿ ಆಗುವವರು ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿ ಹೋಗುತ್ತಾರೆ. ಅಂತಹವರನ್ನೂ ನೀವು ಕಾಂಟ್ರ್ಯಾಕ್ಟ್ ಲೇಬರ್ ರೀತಿ ಟ್ರೀಟ್ ಮಾಡಿದ್ರೆ ಒಳ್ಳೆಯದಾಗುತ್ತಾ?. ಕೋಚಿಂಗ್ ಸೆಂಟರ್ನಲ್ಲಿ ಹಣ ಕೊಟ್ಟು ಒಂದಿಷ್ಟು ಟ್ರೈನಿಂಗ್ ಪಡೆದಿರುತ್ತಾರೆ. ನಾಲ್ಕು ವರ್ಷದಲ್ಲಿ ಅಷ್ಟು ಹಣ ವಾಪಸ್ ಬರೋದಿಲ್ಲ. ಇದನ್ನು ದೇಶದ ಯುವಕರು ಒಪ್ಪೋದಿಲ್ಲ ಎಂದರು.
ಇದನ್ನೂ ಓದಿ: ಬೆಳಗಾವಿಯಲ್ಲೂ ಅಗ್ನಿಪಥ ವಿರುದ್ಧ ಯುವಕರ ಸಿಟ್ಟು!
ಇದರಲ್ಲಿ ರಾಜಕಾರಣ ಮಾಡೋದು ಸರಿ ಅಲ್ಲ. ಇಂತಹ ಯೋಜನೆ ತಂದು ಯುವಕರನ್ನು ಪ್ರಚೋದಿಸುತ್ತಿದ್ದಾರೆ. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದೆ. ನಾಳೆ ಕಾಂಗ್ರೆಸ್ ವತಿಯಿಂದ ಜಂತರ್ ಮಂತರ್ನಲ್ಲಿ ಸತ್ಯಾಗ್ರಹ ಮಾಡುತ್ತೇವೆಂದು ತಿಳಿಸಿದರು.
ಹುದ್ದೆಗಳನ್ನು ಭರ್ತಿ ಮಾಡಿಲ್ಲ: ಕೇಂದ್ರ ಸರ್ಕಾರ ಇತ್ತೀಚೆಗೆ ಯಾವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ರಕ್ಷಣಾ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳು ಇವೆ. ಅದಕ್ಕೂ ಕೂಡ ಕೇಂದ್ರ ಸರ್ಕಾರ ಸಹಾಯ ಮಾಡ್ತಿಲ್ಲ. ಹಾಗಾಗಿ, ರಾಜ್ಯ ಸರ್ಕಾರ ಕೂಡ ಖಾಲಿ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ. ಜನರಿಗೆ ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು. ಇನ್ನು ಪ್ರಧಾನಿ ಮೋದಿ ತಲೆಯಲ್ಲೇನಿದೆ ಅಂತಾ ನನಗೆ ಚೆನ್ನಾಗಿ ಗೊತ್ತು. ಎರಡೆರಡು ಕಡೆ ಸ್ಪರ್ಧೆ ಮಾಡಿದ್ದಾರೆ. ರಾಹುಲ್ ಗಾಂಧಿ ಎರಡು ಕಡೆ ಸ್ಪರ್ಧೆ ಮಾಡಿರೋದನ್ನು ತಲೆಯಲ್ಲಿಟ್ಟುಕೊಂಡು ಹೀಗೆ ಮಾಡಿದ್ದಾರೆಂದರು.
ಇಡಿ ವಿಚಾರಣೆ : ನ್ಯಾಷನಲ್ ಹೆರಾಲ್ಡ್ ನಮ್ಮ ಪಕ್ಷದ ಆಸ್ತಿ. ಇದನ್ನು ನಾವು ಉಳಿಸಿಕೊಳ್ಳಲಿಲ್ಲ ಅಂದ್ರೆ ನೆಹರು ಯಾವ ಉದ್ದೇಶಕ್ಕಾಗಿ ಪತ್ರಿಕೆ ಕಟ್ಟಿದ್ದರೋ ಅದು ವಿಫಲವಾಗುತ್ತದೆ. ನಮ್ಮ ತತ್ವ, ಸಿದ್ಧಾಂತಗಳನ್ನು ಉಳಿಸಿಕೊಳ್ಳಲು ಈ ಹೋರಾಟ ನಡೆಯುತ್ತಿದೆ. ಜನರ ಮುಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಮೇಜ್ ಕುಗ್ಗಿಸೋಕೆ ಈ ರೀತಿ ಕುತಂತ್ರ ಮಾಡಲಾಗುತ್ತಿದೆ. ಇದಕ್ಕೆ ಇಡಿ, ಐಟಿಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದರು.