ಕಲಬುರಗಿ : ವಿರೋಧ ಪಕ್ಷದ ನಾಯಕರಾಗಿರುವವರು ಹಗುರವಾಗಿ ಮಾತನಾಡಬಾರದು. ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸ್ವಾಗತಿಸಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಯಡಿಯೂರಪ್ಪ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರು ಏನು ಮಾಡಿದ್ದಾರೆ ಎಂದು ಹೇಳಲಿ. ವಿರೋಧ ಪಕ್ಷದಲ್ಲಿ ನಾಯಕರಾಗಿರುವವರು ಹಗುರವಾಗಿ ಮಾತನಾಡಬಾರದು. ಅದು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್‌ವೈ : ನಾವು ಮಾಡಿದ ಅನೇಕ ಕಾರ್ಯಕ್ರಮಗಳನ್ನು ಜನ ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಇವರು ಒಳ್ಳೆಯ ಕೆಲಸ ಮಾಡಿದ್ದರೆ ಅಧಿಕಾರ ಯಾಕೆ ಕಳೆದುಕೊಂಡರು?. ಹಿಂದಿನಿಂದಲೂ ಹಗುರವಾಗಿ ಮಾತನಾಡುವುದು. ಟೀಕೆ ಮಾಡುವುದು ಮಾಡಿಕೊಂಡು ಬಂದಿರವಂತದ್ದು. ವಿರೋಧ ಪಕ್ಷದ ಮುಖಂಡರಾಗಿ ಸ್ವಲ್ಪ ಜವಾಬ್ದಾರಿಯಿಂದ ಮಾತನಾಡಬೇಕೆಂದು ಹೇಳಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ : ರಾಜ್ಯದಲ್ಲಿ ಬಿಜೆಪಿಯ ಪರ ವಾತಾವರಣ ಇದೆ. ಯಾವುದೇ ಶಕ್ತಿ ಕೂಡ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಅನೇಕರು ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಕನ ಕನಸ್ಸು ಕಾಣುತ್ತಿದ್ದಾರೆ. ಅದು ಯಾವುದೂ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ. ದೇಶಕ್ಕೆ ಮೋದಿಯಂತಹ ನಾಯಕ ಸಿಕ್ಕಿದ್ದು ಸೌಭಾಗ್ಯ. ಇಡೀ ಪ್ರಪಂಚವೇ ಅವರನ್ನು ಹಾಡಿ ಹೊಗಳುತ್ತಿದೆ. ಅಂತಹ ಮಹಾನಾಯಕ ನೇತೃತ್ವ ಇರುವಾಗ ರಾಜ್ಯದಲ್ಲಿ ನಿಶ್ಚಿತವಾಗಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಆಡಳಿತಕ್ಕೆ ಬರಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಇವತ್ತು ಜೆ ಪಿ ನಡ್ಡಾ ಬಂದಿದ್ದಾರೆ. ಅದರಂತೆ ಮುಂದೆ ಎರಡು ಮೂರು ಬಾರಿ ಮೋದಿಯವರು ಕೂಡ ಕರ್ನಾಟಕಕ್ಕೆ ಬರುವವರು ಇದ್ದಾರೆ ಎಂದರು.ಇದೆ ವೇಳೆ ಜಮೀರ್ ಅಹ್ಮದ್ ಕೆಸಿಆರ್ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಬಿಎಸ್‌ವೈ ನಿರಾಕರಿಸಿದರು.
ಪಕ್ಷದಲ್ಲಿ ನನಗೆ ಯಾವುದೂ ಕೊರತೆಯಾಗಿಲ್ಲ : ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಹೈ ವೋಲ್ಟೇಜ್ ಸಭೆ ವೇಳೆ ನಾನು ಬೇರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆದಾದ ಮೇಲೆ ಬಂದು ಏನೇನು ಚುನಾವಣೆ ಪ್ರಯುಕ್ತ ಮಾಡಬೇಕಾದ ಕಾರ್ಯಗಳ ಕುರಿತು ಚರ್ಚೆ ಮಾಡಿದ್ದೇವೆ. ಇದಕ್ಕೆ ಬೇರೆ ಏನು ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪಕ್ಷದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿಲ್ಲ. ರಾಜ್ಯದಲ್ಲಿ ಕೇಂದ್ರದಲ್ಲಿ ಎರಡು ಕಡೆ ಯಡಿಯೂರಪ್ಪಗೆ ಕೊಡುವಂತ ಎಲ್ಲಾ ಸ್ಥಾನಮಾನ ಗೌರವ ಕೊಟ್ಟಿದ್ದಾರೆ. ಯಾವುದೆ ರೀತಿಯ ಕೊರತೆ ನನಗೆ ಮಾಡಿಲ್ಲ. ಪಕ್ಷದಲ್ಲಿ ತುಂಬಾ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ನಾನು ಖುಣಿಯಾಗಿದ್ದೇನೆ ಎಂದು ಹೇಳಿದರು.
ಜೆಪಿ ನಡ್ಡಾಗೆ ಸ್ವಾಗತ : ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾಜಿ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹಾಗೂ ಇತರೆ ನಾಯಕರು ಸ್ವಾಗತಿಸಿದರು. ಬಳಿಕ ಇಲ್ಲಿಂದ ವಿಜಯಪುರ ಸಿದ್ದೇಶ್ವರ ಸ್ವಾಮೀಜಿ ಆಶ್ರಮಕ್ಕೆ ತೆರಳಿದ ನಾಯಕರು, ಅಲ್ಲಿಂದ ಸಿಂದಗಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇದನ್ನೂ ಓದಿ : ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನನ್ನು ಸೋಲಿಸಲು ತಾನೇ ಟೊಂಕ ಕಟ್ಟಿ ನಿಂತಿದೆ: ಬಿಜೆಪಿ ಟ್ವೀಟ್