ಕಲಬುರಗಿ: ಮುಂದಿನ ಸಿಎಂ ವಿಚಾರವಾಗಿ ನಮ್ಮ ಪಕ್ಷದ ಶಾಸಕ ಜಮೀರ್ ಅಹ್ಮದ್ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಈರೀತಿ ಮಾತನಾಡೋದಿಲ್ಲ ಎಂದು ಸ್ವಪಕ್ಷೀಯ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಸಿಎಂ ಸ್ಥಾನಕ್ಕೆ ಅರ್ಹತೆ ಇರೋರು ಬಹಳ ಜನರಿದ್ದಾರೆ. ಹಾಗಾಗಿ ಈ ಚರ್ಚೆ ಕೇಳಿ ಬರುತ್ತಿದೆ. ಆದರೆ, ಬಿಜೆಪಿಯವರಿಗೆ ಯಡಿಯೂರಪ್ಪ ಬಿಟ್ಟರೆ ಗತಿ ಇಲ್ಲವೆಂದು ಅವರು ಟೀಕಿಸಿದರು.
ಜಮೀರ್ ಅಹ್ಮದ್ ಖಾನ್ ಜವಾಬ್ದಾರಿ ಇರುವ ನಾಯಕರು ಹಾಗೂ ಯಾರಿಗೆ ನಾಲಿಗೆ ಮೇಲೆ ಹಿಡಿತ ಇರುತ್ತದೆಯೋ ಅವರು ಈ ರೀತಿ ಮಾತನಾಡೋದಿಲ್ಲ. ಇದರಿಂದ ಮುಂದಿನ ಬಾರಿ ಅಧಿಕಾರ ಹಿಡಿಯುವ ಪಕ್ಷದ ಗುರಿಗೆ ಹಿನ್ನಡೆಯಾಗುತ್ತದೆ. ಮಾತನಾಡುವವರು ಇದನ್ನು ಅರಿತುಕೊಂಡು ಮಾತನಾಡಬೇಕು. ನಮ್ಮ ಮಾತಿನಿಂದ ಬೇರೆ ಸಮಾಜ ಹಾಗೂ ಪಕ್ಷದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಅರಿತುಕೊಂಡು ಮಾತನಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
ಇನ್ಮುಂದೆ ಯಾರೂ ಸಹ ಅನಗತ್ಯವಾಗಿ ಹಾಗೂ ಬಹಿರಂಗವಾಗಿ ಈ ವಿಚಾರ ಚರ್ಚೆ ಮಾಡದಂತೆ ಸೂಚಿಸಲಾಗಿದೆ. ಅದಾಗ್ಯೂ ಮಾತನಾಡಿದವರ ವಿರುದ್ಧ ಶಿಸ್ತು ಸಮಿತಿ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಖರ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: Ice Cream ನಲ್ಲಿ ಮಕ್ಕಳಿಗೆ ವಿಷ ಬೆರೆಸಿಕೊಟ್ಟ ಪಾಪಿ ತಂದೆ!