ಕಲಬುರಗಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆಗಿಂತ ದೊಡ್ಡ ಚಿತ್ರಬೇಕಾ?. ಕಾಶ್ಮೀರ ಫೈಲ್ಸ್ ಸಿನಿಮಾದಲ್ಲಿ ಅಂಥಾ ವಿಶೇಷ ಏನಿದೆ?. ಕಾಶ್ಮೀರ ಫೈಲ್ಸ್ ಚಿತ್ರಕ್ಕಾಗಿ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರಕ್ಕೆ ತೊಂದರೆ ಕೊಡುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪುನೀತ್ ರಾಜ್ಕುಮಾರ್ ಅವರ 'ಜೇಮ್ಸ್' ಚಿತ್ರ ಎತ್ತಂಗಡಿಗೆ ಬಿಜೆಪಿ ಶಾಸಕರ ಒತ್ತಡ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.
ನನಗೂ ಚಿತ್ರರಂಗದ ಅನೇಕರಿಂದ ಫೋನ್ ಬರ್ತಾ ಇವೆ. 'ಜೇಮ್ಸ್' ಚಿತ್ರ ತೆಗೆದು 'ಕಾಶ್ಮೀರಿ ಫೈಲ್ಸ್' ಹಾಕುವಂತೆ ಬಿಜೆಪಿ ಶಾಸಕರು, ಮಂತ್ರಿಗಳು ಪೋನ್ ಮಾಡಿ ಹೇಳುತ್ತಿದ್ದಾರೆ ಎನ್ನುತ್ತಿದ್ದಾರೆ ಎಂದು ಹೇಳಿದರು. ಕಾಶ್ಮೀರ ಫೈಲ್ಸ್ ಸಿನಿಮಾದಲ್ಲಿ ಅಂಥಾ ವಿಶೇಷ ಏನಿದೆ.? ಗಾಂಧಿ ಚಿತ್ರಕ್ಕಿಂತ ಬೇರೆ ಉತ್ತಮ ಚಿತ್ರ ಇದೇಯಾ?. ಈ ಚಿತ್ರದ ಮೂಲಕ ಕಾಂಗ್ರೆಸ್ನವರು ಕೆಟ್ಟವರು ಅಂತಾ ಬಿಜೆಪಿಯವರು ಬಿಂಬಿಸಲು ಹೊರಟಿದ್ದಾರೆ. ಬಿಜೆಪಿಯವರು ತಮ್ಮ ಪಕ್ಷದ ಅಜೆಂಡಾಕ್ಕಾಗಿ 'ಕಾಶ್ಮೀರ್ ಫೈಲ್ಸ್' ಸಿನಿಮಾ ಮಾಡಿದ್ದಾರೆ ಎಂದು ಟೀಕಿಸಿದರು.
'ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ತೆರಿಗೆ ರಿಯಾಯಿತಿ ಕೊಡುವುದಕ್ಕೇನಿದೆ?. ಪುನೀತ್ ರಾಜಕುಮಾರ ಕನ್ನಡ ನೆಲದ ಮೇರು ನಟ, ದೇಶಕಂಡ ಮಹಾನ್ ಕಲಾವಿದ ಅವರ ಕೊನೆಯ ಚಿತ್ರಕ್ಕೆ ತೊಂದರೆ ಕೊಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ಈ ವಿಚಾರದ ಬಗ್ಗೆ ಗಮನಹರಿಸಬೇಕು ಎಂದು ಡಿಕೆಶಿ ಒತ್ತಾಯಿಸಿದರು.
ಎಲ್ಲರಿಗೂ ಅವಕಾಶ ಕೊಡಿ: ದಕ್ಷಿಣ ಕನ್ನಡ ಜಿಲ್ಲೆಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ರೀತಿ ವರ್ತಿಸುವುದು ಸರಿಯಲ್ಲ. ಎಲ್ಲ ಕಡೆ ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಹಾಗಾದರೆ ಚರ್ಚ್, ಮಸೀದಿ ಮುಂದೆ ಹಿಂದುಗಳಿಗೆ ಅವಕಾಶ ನೀಡದೇ ಹೋದರೆ ಏನಾಗುತ್ತೆ?. ಅನೇಕರು ಅನೇಕ ರೀತಿಯ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಯಾರೇ ತೊಂದರೆ ಕೊಡುವ ಕೆಲಸವನ್ನು ಮಾಡಬಾರದು ಎಂದರು.
ಇದನ್ನೂ ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಯೋಗಿ ಆದಿತ್ಯನಾಥ್ಗೆ ನೋಟಿಸ್ ಜಾರಿ