ಕಲಬುರಗಿ: ಬೀದರ್ನಿಂದ ಬಳ್ಳಾರಿವರೆಗೆ 4 ವೇ ಎಕ್ಸ್ಪ್ರೆಸ್ ಹೈವೇ ನಿರ್ಮಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ಸಂಪರ್ಕ ಉತ್ತಮಗೊಳಿಸಲು ಈ ಹೆದ್ದಾರಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಸಿಎಂ ಮಾತನಾಡಿದರು. ಈ ಪ್ರದೇಶ ಅಷ್ಟು ಸುಲಭವಾಗಿ ದೊರೆತಿಲ್ಲ. ಈ ಭಾಗದ ವಿಮೋಚನೆಗೆ ನಾವು ಒಂದು ವರ್ಷ ಕಾಯಬೇಕಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ನಿಲುವು ಮತ್ತು ನೇತೃತ್ವದಿಂದ ನಿರ್ಧಾರದಿಂದ ಈ ಭಾಗ ಸಮಗ್ರ ಕರ್ನಾಟಕ ಸೇರುವಂತಾಯಿತು ಎಂದು ಕಲ್ಯಾಣ ಕರ್ನಾಟಕ ವಿಮೋಚನೆಗೆ ಶ್ರಮಿಸಿದ ಗಣ್ಯರು ಹಾಗೂ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿಸಲು ಹೋರಾಡಿದ ಮಹನೀಯರನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.
ವರ್ಷಪೂರ್ತಿ ಆಚರಣೆ: ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ವರ್ಷವನ್ನು ವರ್ಷಪೂರ್ತಿ ಆಚರಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಜನಜಾಗೃತಿಗಾಗಿ ಎಲ್ಲ ಜಿಲ್ಲೆಗಳಲ್ಲಿ ರಥಯಾತ್ರೆ ಕೈಗೊಳ್ಳಲಾಗುವುದು. ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ, ಅವರಿಗೆ ಸಮಸ್ತ ಕರ್ನಾಟಕ ವಿಶೇಷವಾಗಿ ಕಲ್ಯಾಣ ಕರ್ನಾಟಕ ಜನತೆಯ ಪರವಾಗಿ ಶುಭಾಶಯ ಕೋರಿದ ಮುಖ್ಯಮಂತ್ರಿಗಳು, ಪ್ರಧಾನಿ ಮೋದಿ ಅವರು ಈ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಅಂತ ಭರವಸೆ ನೀಡಿ ಎಂದು ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ಕೈಗಾರಿಕಾ ಅಭಿವೃದ್ಧಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರವು ಕಲಬುರಗಿಯಲ್ಲಿ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಅಲ್ಲದೆ, ರಾಜ್ಯ ಸರ್ಕಾರ ರಾಯಚೂರು ಹಾಗೂ ವಿಜಯಪುರದಲ್ಲಿ ಟೆಕ್ಸ್ಟೈಲ್ ಪಾರ್ಕ್ ಮಾಡಲು ನಿರ್ಧರಿಸಿದೆ. ಇದರಿಂದ ಕನಿಷ್ಠ 25 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಅಲ್ಲದೆ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್, ಯಾದಗಿರಿಯಲ್ಲಿ ಫಾರ್ಮಾಸೂಟಿಕಲ್ ಕ್ಲಸ್ಟರ್ ನಿರ್ಮಿಸಲಾಗುವುದು. ಕೊಪ್ಪಳದಲ್ಲಿ ಈಗಾಗಲೇ ಆಟಿಕೆಗಳ ಕ್ಲಸ್ಟರ್ ನಿರ್ಮಾಣವಾಗುತ್ತಿದೆ. ಬೀದರ್ನಲ್ಲಿ ಕೇಂದ್ರದ ನೆರವಿನೊಂದಿಗೆ 90 ಕೋಟಿ ರೂ. ವೆಚ್ಚದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕುರಿತ ಸಿಪೆಟ್ ಸಂಸ್ಥೆ ಪ್ರಾರಂಭಿಸಲಾಗುತ್ತದೆ. ಹೀಗೆ ಪ್ರತಿ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಈ ಭಾಗದಲ್ಲಿ ರಾಯಚೂರು, ಬಳ್ಳಾರಿ ವಿಮಾನ ನಿಲ್ದಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರದ ನೆರವಿನೊಂದಿಗೆ ಯಾದಗಿರಿ, ರಾಯಚೂರು, ಕಲಬುರಗಿ ರಿಂಗ್ ರೋಡ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಪಕ್ಷಭೇದ ಮರೆತು ಶ್ರಮಿಸಿ: ಈ ಭಾಗದ ಅಭಿವೃದ್ದಿಯಾಗಬೇಕೆಂದರೆ ರಾಜಕಾರಣಿಗಳು ಪಕ್ಷಬೇಧ ಮರೆತು ಕೆಲಸ ಮಾಡಬೇಕು. ರಾಜಕಾರಣ ಮಾಡಿದರೆ ಈ ಭಾಗಕ್ಕೆ ದೊಡ್ಡ ದ್ರೋಹ ಮಾಡಿದಂತಾಗುತ್ತದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಲಬುರಗಿ ಅಭಿವೃದ್ಧಿ: ಕಲಬುರಗಿ ಅಭಿವೃದ್ಧಿಗೆ 100 ಕೋಟಿ ನೀಡಿದ್ದೇನೆ. ಕಲಬುರಗಿ ಕರ್ನಾಟಕದ ಭವಿಷ್ಯದ ನಗರವಾಗಿದೆ. ಇಲ್ಲಿ ಎಲ್ಲ ರೀತಿಯ ವೈಫೈ ಸಂಪರ್ಕ, ಕೇಬಲ್ ಸಂಪರ್ಕ ಮತ್ತಿತರ ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ಅಂತಾರಾಷ್ಟ್ರೀಯ ನಗರ ಮಾಡಲು ತೀರ್ಮಾನಿಸಿದ್ದೇವೆ. ಸಮಸ್ತ ಕರ್ನಾಟಕ ಅಭಿವೃದ್ದಿಯಾಗುತ್ತಿರುವ ಈ ಸಮಯದಲ್ಲಿ ಐತಿಹಾಸಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕವೂ ಅಷ್ಟೇ ವೇಗವಾಗಿ ಬೆಳೆಯಬೇಕು. ಕಲ್ಯಾಣ ಕರ್ನಾಟಕದ ಮೂಲಕ ನವ ಕರ್ನಾಟಕ ಹಾಗೂ ನವ ಭಾರತದ ಅಭಿವೃದ್ದಿಯಾಗಬೇಕು ಎಂದು ಸಿಎಂ ಆಶಿಸಿದರು.
2100 ಶಾಲಾ ಕೊಠಡಿ, 2500 ಅಂಗನವಾಡಿ ಕೇಂದ್ರ ಪ್ರಾರಂಭ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸಕ್ತ ವರ್ಷದಲ್ಲಿ 2,100 ಶಾಲಾ ಕೊಠಡಿ ನಿರ್ಮಾಣ ಹಾಗೂ 2500 ಅಂಗನವಾಡಿ ಕೇಂದ್ರ ತೆರೆಯಲು ಕ್ರಮ ವಹಿಸಲಾಗುವುದು. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಆದೇಶಿಸಲಾಗಿದೆ. ಆರೋಗ್ಯ ಸೇವೆ ಉತ್ತಮಪಡಿಸಲು 68 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.
ಗ್ರೀನ್ ಕಾರಿಡಾರ್: ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬಸವರಾಜ್ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಸಂಘ ಮಾಡಿದ್ದೇವೆ. ಸುಮಾರು 2 ಲಕ್ಷ ಎಕರೆಗಿಂತ ಹೆಚ್ಚಿರುವ ಬಂಜರು ಭೂಮಿಯನ್ನು ಕೃಷಿ ಯೋಗ್ಯ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಈ ಭಾಗದ ಹಸಿರು ಪ್ರದೇಶ ಹೆಚ್ಚಿಸಲು ಕೊಪ್ಪಳದಿಂದ ಕಲಬುರಗಿ, ಬಳ್ಳಾರಿಯಿಂದ ರಾಯಚೂರುವರೆಗೆ ಗ್ರೀನ್ ಕಾರಿಡಾರ್ ಮಾಡಲು ತೀರ್ಮಾನಿಸಿದ್ದೇವೆ. ಇದರೊಂದಿಗೆ ಕೃಷಿ ಅರಣ್ಯಕ್ಕೆ ಉತ್ತೇಜನ ನೀಡಲು ಅರಣ್ಯ ಇಲಾಖೆಗೆ 10 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಸಿಎಂ ಮಾಲಾರ್ಪಣೆ