ಕಲಬುರಗಿ: ರಾಜಕೀಯ ಪ್ರವೇಶಿಸಿ ಒಂದೇ ಒಂದು ಬಾರಿ ಅಧಿಕಾರ ಸಿಕ್ಕರೆ ಸಾಕು ಐಷಾರಾಮಿ ಜೀವನ ನಡೆಸುವವರೇ ಹೆಚ್ಚು. ಹೀಗಿರುವಾಗ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಆಗಿ ಅಧಿಕಾರ ಅನುಭವಿಸಿದ ಮಹಿಳೆಯೊಬ್ಬರು ಇಂದಿಗೂ ಫುಟ್‌ಪಾತ್ ಮೇಲೆ ಟೀ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸುನಂದಾ ರಾಜಾರಾಮ್ ಐಹೊಳೆ ನಗರದ ಹಳೇ ಜೇವರ್ಗಿ ಕ್ರಾಸ್ ಬಳಿಯ ಪಾದಚಾರಿ ರಸ್ತೆ ಮೇಲೆ ಟೀ ಶಾಪ್ ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದಾರೆ.
2007ರಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸುನಂದಾ ಅವರು ವಾರ್ಡ್ ಸಂಖ್ಯೆ 49 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಕೂಡ ಕಾಂಗ್ರೆಸ್ ಮತ್ತು ಬಿಎಸ್ಪಿ ಸದಸ್ಯರ ಬೆಂಬಲದಿಂದ 2010-11ರಲ್ಲಿ ಇವರು ಕಲಬುರಗಿಯ ಮೇಯರ್ ಗದ್ದುಗೆ ಏರಿದ್ದರು.
ಸಮುದಾಯ ಭವನಗಳ ನಿರ್ಮಾಣ, ಕುಡಿಯುವ ನೀರು, ಸುಸಜ್ಜಿತ ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆ, ಫುಟ್ ಪಾತ್.. ಹೀಗೆ ಮೂಲಭೂತ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಿ ಕಲಬುರಗಿ ನಗರಾಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದರು.
ಪ್ರತಿನಿತ್ಯ ಮಾಜಿ ಮೇಯರ್ ಸುನಂದಾ ಅವರ ಟೀ ಅಂಗಡಿಗೆ ನೂರಾರು ಜನ ಬಂದು ಟೀ ಸೇವಿಸಿ ತೆರಳುತ್ತಿದ್ದರೂ ಬಹಳಷ್ಟು ಜನರಿಗೆ ಇದು ಮಾಜಿ ಮೇಯರ್ ಟೀ ಅಂಗಡಿ ಅಂತಾನೇ ಗೊತ್ತಿಲ್ಲ.
'ಅವಕಾಶ ಸಿಕ್ಕರೆ ಮತ್ತೊಮ್ಮೆ ಅಖಾಡಕ್ಕೆ ಇಳಿಯುತ್ತೇನೆ'
ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಸುನಂದಾ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ. ಬಿಜೆಪಿ ಇವರನ್ನು ಗುರುತಿಸಿ ಮತ್ತೆ ಟಿಕೆಟ್ ನೀಡಿದರೆ, ಪಾಲಿಕೆ ಚುನಾವಣೆ ಅಖಾಡಕ್ಕೆ ಇಳಿಯುವುದಾಗಿ ಹೇಳುತ್ತಾರೆ. ಆದರೆ ಈಗಿನ ರಾಜಕೀಯ ಬೆಳವಣಿಗೆಯಲ್ಲಿ ಇಂಥವರಿಗೆ ಟಿಕೆಟ್ ಸಿಗುತ್ತಾ? ಅನ್ನೋದು ದೊಡ್ಡ ಪ್ರಶ್ನೆ.