ಕಲಬುರಗಿ: ಕುಡುಗೋಲು ತಗುಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘಾ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಮೊಹ್ಮದ್ ಮೆಹೆಬೂಬ್ ಸುಲ್ತಾನ್‍ಸಾಬ್ ಶಿಕ್ಷೆಗೆ ಗುರಿಯಾದ ಆಪಾದಿತ. ಇಲ್ಲಿನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಗದೀಶ್ ವಿ. ಎನ್. ಅವರು 2 ವರ್ಷಗಳ ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಮಾಹಿತಿ : ಕಳೆದ 2019ರ ಏಪ್ರಿಲ್.12ರಂದು ನಗರದ ರಾಮಮಂದಿರ ಕಡೆಯಿಂದ ನಾಗನಹಳ್ಳಿ ರಿಂಗ್ ರಸ್ತೆ ಕಡೆಗೆ ಕುರಿಗಳಿಗೆ ಮರದ ತಪ್ಪಲು ಕೊಯ್ಯಲು ಬಳಸುವ ಕುಡುಗೋಲನ್ನು ತನ್ನ ಸೈಕಲ್‌ಗೆ ಕಟ್ಟಿಕೊಂಡು ಮೊಹ್ಮದ್ ಮೆಹೆಬೂಬ್ ತೆರಳುತ್ತಿದ್ದನು. ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘಾ ಆತನ ಸೈಕಲ್ ಹಿಂದೆ ಬೈಕ್ ಮೇಲೆ ಬರುತ್ತಿದ್ದಳು.
ತಿರುವೊಂದರಲ್ಲಿ ಸೈಕಲ್ ಅನ್ನು ಎಡಕ್ಕೆ ತಿರುಗಿಸಿದಾಗ ಹಿಂದೆ ಸಿಕ್ಕಿಸಿದ್ದ ಕುಡುಗೋಲು ಬಲಕ್ಕೆ ಹೊರಳಿ ಬೈಕ್ ಮೇಲೆ ಬರುತ್ತಿದ್ದ ಮೇಘಾ ಕತ್ತನ್ನು ಕತ್ತರಿಸಿತ್ತು. ತೀವ್ರ ರಕ್ತಸ್ರಾವದಿಂದ ಮೇಘಾ ಸಾವನ್ನಪ್ಪಿದ್ದಳು. ಕರುಣೇಶ್ವರ ಬಡಾವಣೆಯ ನಿವಾಸಿಯಾಗಿದ್ದ ಮೇಘಾ (20) ನಗರದ ಪಿಡಿಎ ಕಾಲೇಜಿನಲ್ಲಿ ಮೊದಲನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು.
ಈ ಕುರಿತು ಸಂಚಾರಿ ಪೋಲಿಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಮಹಾದೇವ್ ಪಂಚಮುಖಿ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದರು. ವಿಚಾರಣೆ ಕೈಗೊಂಡ ನ್ಯಾಯಾಧೀಶರು ಮೊಹ್ಮದ್ ಮೆಹೆಬೂಬ್‌ಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ತಪ್ಪಿತಸ್ಥ ಭರಿಸುವ ದಂಡವನ್ನು ಮೃತಳ ತಾಯಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ್ ತೇಲಿ ಅವರು ವಾದ ಮಂಡಿಸಿದರು.
ಇದನ್ನೂ ಓದಿ: ನನ್ನ ಮಗು ಅಲ್ಲ ಎಂದು ಶಾಸಕರು ಮನೆ ದೇವರ ಮೇಲೆ ಆಣೆ ಮಾಡಲಿ: ಸಂತ್ರಸ್ತೆ ಗಂಭೀರ ಆರೋಪ