ಕಲಬುರಗಿ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಕೊರೊನಾ 3ನೇ ಅಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆ ಅಂತಹ ಮಕ್ಕಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವಿ ಜೋತ್ಸ್ನಾ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ 28,786ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇದರಲ್ಲಿ 632 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚುವರಿ ಅಪೌಷ್ಟಿಕತೆ ನಿರ್ಮೂಲನಾ ಕೇಂದ್ರಗಳನ್ನು ತೆರೆಯಲು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ. ಕೊರೊನಾ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಕೂಡ ಸಿದ್ಧತೆ ಮಾಡಿಕೊಂಡಿದೆ. ಚಿಕಿತ್ಸೆಗಾಗಿ ಮಕ್ಕಳ ಸೈಜ್ ಮಾಸ್ಕ್, ಆಕ್ಸಿಜನ್ ಮಾಸ್ಕ್, ವೆಂಟಿಲೇಟರ್, ಐಸಿಯು ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರ ಆಕ್ರೋಶ
ಇತ್ತ 3ನೇ ಅಲೆ ಸಿದ್ಧತೆ ಕುರಿತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ಪಿಡಿಯಾಟ್ರೀಕ್ ವೈದ್ಯರ, ಮಕ್ಕಳ ಚಿಕಿತ್ಸೆ ನೀಡುವ ಸ್ಟಾಫ್ ನರ್ಸ್ಗಳ ಕೊರತೆ ಇದೆ.
ಹೀಗಿರುವಾಗ 3ನೇ ಅಲೆ ಬಂದ್ರೆ ಯಾವ ರೀತಿ ನಿಭಾಯಿಸುತ್ತಾರೆ?. 3ನೇ ಅಲೆ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಹಿನ್ನೆಲೆ ಮಕ್ಕಳ ರಕ್ಷಣೆಗಾಗಿ ಜಿಲ್ಲಾಡಳಿತ ಎಲ್ಲ ರೀತಿಯ ವ್ಯವಸ್ಥೆಗಳನ್ನ ಮಾಡಿಕೊಳ್ಳಬೇಕು. ಆದ್ರೆ ಈವರೆಗೂ ಯಾರೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.