ಕಲಬುರಗಿ : ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆಗೆ ನಡೆಸಿದ ಸಂವಾದದಲ್ಲಿ ಕಲಬುರಗಿಯ ಮಹಿಳೆಗೂ ಮಾತನಾಡುವ ಅವಕಾಶ ಲಭಿಸಿತು.
ಪ್ರಧಾನಿ ಮೋದಿ ಸಂವಾದಕ್ಕೆ ಕರ್ನಾಟಕದ ಕಲಬುರಗಿ ಜಿಲ್ಲೆ ಸೇರಿದಂತೆ ದೇಶದ ಏಳು ರಾಜ್ಯಗಳ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿತ್ತು. ಕಲಬುರಗಿ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಆಡಿಟೋರಿಯಂನಲ್ಲಿ ಪ್ರಧಾನಿ ಸಂವಾದದ ನೇರ ಪ್ರಸಾರ ಆಯೋಜಿಸಲಾಗಿತ್ತು.
ಕಲಬುರಗಿಯಿಂದ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್ ಯೋಜನೆಯ ಲಾಭ ಪಡೆದ ಕಮಲಾಪುರ ತಾಲೂಕಿನ ಕಿಣ್ಣಿಸಡಕ್ ನಿವಾಸಿ ಸಂತೋಷಿ, ಕಲಬುರಗಿ ತಾಲೂಕಿನ ಬೇಲೂರ್ (ಜೆ) ಗ್ರಾಮದ ನೀಲಕಂಠ ಬಿರಾದಾರ.
ಚಿಂಚೋಳಿ ತಾಲೂಕಿನ ಕೋಡ್ಲಿ ಗ್ರಾಮದ ಅಣ್ಣಾರಾವ್ ಪೆದ್ದಿ ಹಾಗೂ ಆಳಂದ ತಾಲೂಕಿನ ಬೆಣ್ಣೆಶಿರೂರ್ ಗ್ರಾಮದ ಅಲ್ಲಮಪ್ರಭು ಸೇರಿ ನಾಲ್ವರು ಫಲಾನುಭವಿಗಳನ್ನು ಪ್ರಧಾನಿ ಸಂವಾದಕ್ಕೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಪ್ರಧಾನಿ ಜೊತೆಗೆ ಸಂತೋಷಿಗೆ ಮಾತನಾಡುವ ಅವಕಾಶ ದೊರೆಯಿತು.
ಸಂತೋಷಿ ಜತೆ ಪ್ರಧಾನಿ ಮಾತು : ಈ ಸಂವಾದದಲ್ಲಿ ಕಿಣ್ಣಿಸಡಕ್ ಗ್ರಾಮದ ಫಲಾನುಭವಿ ಸಂತೋಷಿ ಜೊತೆ ಪ್ರಧಾನಿ ಮೋದಿ ಮಾತನಾಡಿದರು. ಈ ವೇಳೆ ಸಂತೋಷಿಗೆ ಯಾವ ಯೋಜನೆಯಿಂದ ಸಂತೋಷವಾಗಿದೆ ಎಂದು ಪ್ರಧಾನಿ ಕೇಳಿದರು. ಮೋದಿ ಪ್ರಶ್ನೆ ಕೇಳುತ್ತಿದ್ದಂತೆ ಫಲಾನುಭವಿ ಸಂತೋಷಿ, ಹೆಲ್ತ್ ಅಂಡ್ ವೆಲ್ನೆಸ್ ಯೋಜನೆಯಿಂದ ತಮಗಾಗಿರೋ ಸಹಾಯ, ಅನುಕೂಲ ಹಾಗೂ ಆರೋಗ್ಯ ಚಿಕಿತ್ಸೆ ಲಾಭದ ಬಗ್ಗೆ ಕ್ಷಣಾರ್ಧದಲ್ಲಿ ಪಟಪಟನೆ ಉತ್ತರಿಸಿದರು.
ಚುನಾವಣೆಗೆ ನಿಲ್ಲಿಸುತ್ತಿದ್ದೆ ಎಂದು ಪ್ರಧಾನಿ : ಸಂತೋಷಿ ವಾಕ್ಚಾತುರ್ಯಕ್ಕೆ ಮನಸೋತ ಪ್ರಧಾನಿ ಮೋದಿ, ನಾನು ಕರ್ನಾಟಕದಲ್ಲಿದಿದ್ದರೆ, ಭಾಜಪಾ ಪಕ್ಷದದಿಂದ ನಿಮ್ಮನ್ನು ಚುನಾವಣೆಗೆ ನಿಲ್ಲಿಸುತ್ತಿದ್ದೆ ಅಂತಾ ಹಾಸ್ಯ ಚಟಾಕಿ ಹಾರಿಸಿ ಸಂವಾದ ಮುಕ್ತಾಯಗೊಳಿಸಿದರು. ಪ್ರಧಾನಿ ಮೋದಿ ಜೊತೆಗಿನ ಸಂವಾದದಿಂದ ಫಲಾನುಭವಿ ಸಂತೋಷಿ ಸಂತಸಗೊಂಡರು.
ಅಲ್ಲದೇ, ನಂತರ ಮಾಧ್ಯಮಗಳೊಂದಿಗೆ ತಮ್ಮ ಸಂತಸ ಹಂಚಿಕೊಂಡ ಸಂತೋಷಿ, ಪ್ರಧಾನಿ ಜೊತೆ ಮಾತನಾಡುವ ಸುವರ್ಣಾವಕಾಶ ಸಿಕ್ಕಿತು. ಇದೇ ವೇಳೆ ಪ್ರಧಾನಿ ಮೋದಿ ಹೇಳಿದಂತೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದಾಗಿಯೂ ಅವರು ತಮ್ಮ ಇಂಗಿತ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೋಲೇ ಗೆಲುವಿನ ಮೆಟ್ಟಿಲು: ಯಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಬಸ್ ಡ್ರೈವರ್ ಮಗಳು