ಕಲಬುರಗಿ: ಜಿಲ್ಲೆಯ ಘತ್ತರಗಿಯಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಂಗ್ರಹವಾದ ಲಕ್ಷಾಂತರ ರೂಪಾಯಿ ದೇಣಿಗೆಯಿಂದ ಜಮೀನು ಖರೀದಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಈ ಮೂಲಕ ಶಿಕ್ಷಣದ ಅಕ್ಷರ ಜೋಳಿಗೆ ಮಕ್ಕಳ ಭವಿಷ್ಯವನ್ನು ಬೆಳಗಿಸುತ್ತಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿ ನೂತನ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಬೇಕೆಂದು ಗ್ರಾಮಸ್ಥರೆಲ್ಲಾ ಸೇರಿಕೊಂಡು ಐದು ಎಕರೆ ಜಮೀನು ಖರೀದಿಸಿ, ಎರಡೂವರೆ ಎಕರೆ ಶಿಕ್ಷಣ ಇಲಾಖೆಗೆ ಹಾಗೂ ಇನ್ನೆರಡುವರೆ ಎಕರೆ ಜಮೀನು ಇತರೆ ಸರ್ಕಾರಿ ಕಚೇರಿಗಳ ಕಟ್ಟಡಕ್ಕಾಗಿ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಕೊಪ್ಪಳದ ಗವಿಮಠದ ಸ್ವಾಮೀಜಿ, ಸೊನ್ನ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ಸಮ್ಮುಖದಲ್ಲಿ ಗ್ರಾಮಸ್ಥರು ಡಿಡಿಪಿಐ ಸಕ್ರಪ್ಪ ಗೌಡ ಅವರಿಗೆ ಶಾಲೆ ಕಟ್ಟಡಕ್ಕಾಗಿ ಜಮೀನು ಒಪ್ಪಿಸಿದರು.
ಘತ್ತರಗಿ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮಕ್ಕಳು ಜೀವ ಭಯದಲ್ಲಿಯೇ ಪಾಠ ಕಲಿಯುವಂತಾಗಿತ್ತು. ಅಲ್ಲದೇ, ಈಗಿರುವ ಸರ್ಕಾರಿ ಶಾಲೆ ಧಾರ್ಮಿಕ ದತ್ತಿ ಇಲಾಖೆ ಜಾಗದಲ್ಲಿದ್ದು, ನೂತನ ಕಟ್ಟಡ ಕಾಮಗಾರಿಗೆ ಕಾನೂನಿನಲ್ಲಿ ಅವಕಾಶವಿರಲಿಲ್ಲ. ಹೀಗಾಗಿ, ನೂತನ ಸರ್ಕಾರಿ ಶಾಲೆ ಕಟ್ಟಡಕ್ಕಾಗಿ ಗ್ರಾಮಸ್ಥರೆಲ್ಲಾ ಸೇರಿಕೊಂಡು ಜಮೀನು ಖರೀದಿಗೆ ಹಣ ಸಂಗ್ರಹಿಸಲು ಅಕ್ಷರ ಜೋಳಿಗೆ ಆರಂಭಿಸಿದ್ದರು.
ಇದನ್ನೂ ಓದಿ: ಶತಮಾನ ಕಂಡ ಹೊಸಬಾಳೆ ಸರ್ಕಾರಿ ಶಾಲೆ: ಹೊಸ ರೂಪ ನೀಡಿದ ನಿರ್ಮಾಪಕ ಕೃಷ್ಣಪ್ಪ
ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಕ್ಷರ ಜೋಳಿಗೆ ಮೂಲಕ ಗ್ರಾಮದಲ್ಲಿ 21 ದಿನಗಳ ಕಾಲ ಪ್ರವಚನ, ಪುರಾಣ ಮತ್ತು ದೇಣಿಗೆ ಸಂಗ್ರಹಣ ಕಾರ್ಯ ನಡೆಯಿತು. ಗ್ರಾಮಸ್ಥರು ಒಂದು ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದು, ಗ್ರಾಮದಲ್ಲಿಯೇ ಐದು ಎಕರೆ ಜಮೀನು ಖರೀದಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಜೊತೆಗೆ ಸುಸಜ್ಜಿತ ನೂತನ ಸರ್ಕಾರಿ ಶಾಲಾ ಕಟ್ಟಡಕ್ಕಾಗಿ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭೂಮಿಗೆ ಪೂಜೆಯೂ ನೆರವೇರಿತು.
ಇದನ್ನೂ ಓದಿ: ಶಿಥಿಲಗೊಂಡ ಘತ್ತರಗಾ ಸರ್ಕಾರಿ ಶಾಲೆ: ಮಕ್ಕಳು, ಶಿಕ್ಷಕರಿಗೆ ಜೀವ ಭಯ
ಭೂಮಿ ಹಸ್ತಾಂತರ ಕಾರ್ಯಕ್ರಮದಲ್ಲಿ ಸಹ ಹಲವರು ಲಕ್ಷಾಂತರ ರೂಪಾಯಿ ಹಣವನ್ನು ಅಕ್ಷರ ಜೋಳಿಗೆಗೆ ಹಾಕಿದರು. ಶಾಸಕ ಎಂ ವೈ ಪಾಟೀಲ್ ಮತ್ತು ಬಿಜೆಪಿ ಮುಖಂಡ ನಿತೀಶ್ ಗುತ್ತೇದಾರ್ ಕೂಡ ಜಮೀನು ಖರೀದಿಗೆ ದೇಣಿಗೆ ಕೊಟ್ಟರು. ಜಮೀನು ಸ್ವೀಕರಿಸಿದ ಡಿಡಿಪಿಐ, ಮಾದರಿ ರೀತಿಯಲ್ಲಿ ಸುಸಜ್ಜಿತ ಶಾಲೆ ಕಟ್ಟುವ ಭರವಸೆ ನೀಡಿದರು.