ಕಲಬುರಗಿ: ಮಹಾನಗರ ಪಾಲಿಕೆ ಚುನಾವಣಾ ಕಣ ರಂಗೇರುತ್ತಿದೆ. ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೆ, ಇಂದು ಕಾಂಗ್ರೆಸ್ ಸಹ ತನ್ನ ಕ್ಯಾಂಡಿಡೇಟ್ ಲಿಸ್ಟ್ ರೀಲಿಸ್ ಮಾಡಿ ಅಖಾಡಕ್ಕೆ ಧುಮುಕಿದೆ. ಒಮ್ಮೆಯೂ ಪಾಲಿಕೆಯ ಚುಕ್ಕಾಣಿ ಹಿಡಿಯದ ಕಮಲಪಾಳಯ, ಈ ಬಾರಿ ಶತಾಯಗತಾಯವಾಗಿ ಗದ್ದುಗೆ ಏರಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ.
ಕಳೆದ ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದೀಗ ಎರಡು ಪ್ರಮುಖ ಪಕ್ಷಗಳ ಮಧ್ಯ ಪೈಪೋಟಿ ಶರುವಾಗಿದೆ. 55 ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆಗೆ ಕಳೆದ ರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಿಕೆ ಚುನಾವಣೆ ಬಿಜೆಪಿ ಉಸ್ತುವಾರಿ ಎನ್ ರವಿಕುಮಾರ್ ರಿಲೀಸ್ ಮಾಡಿದ್ದರು. ಅದರಂತೆ ಇಂದು ಬಿಜೆಪಿ ಹಲವಾರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ವೇಳೆ ಮಾತಾನಾಡಿದ ಎನ್. ರವಿಕುಮಾರ್, ನರೇಂದ್ರ ಮೋದಿ ಅವರ ಜನಪರ ಆಡಳಿತ ಹಾಗೂ ರಾಜ್ಯದಲ್ಲಿ ಈ ಹಿಂದೆ ಯಡಿಯೂರಪ್ಪರ ಆಡಳಿತದ ಯೋಜನೆಗಳಿಂದ ಈ ಬಾರಿ ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆಯನ್ನ ಈ ಭಾರಿ ಕಮಲ ಪಕ್ಷ ಖಂಡಿತವಾಗಿ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನಿಂದಲೂ ಅಧಿಕಾರಕ್ಕಾಗಿ ಪ್ರತಿತಂತ್ರ
ಇತ್ತ ಕಾಂಗ್ರೆಸ್ ಪಕ್ಷ ನಾಮಿನೇಷನ್‌ಗೆ ಕೊನೆ ದಿನವಾದ ಇಂದು ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ರಿಲಿಸ್ ಮಾಡಿದೆ. ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಸಚಿವ ಯು. ಟಿ. ಖಾದರ್ ಮತ್ತು ಮಾಜಿ ಎಮ್‌ಎಲ್‌ಸಿ ತಿಪ್ಪಣಪ್ಪ ಕಮಕನೂರು ನೇತೃತ್ವದಲ್ಲಿ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು.
ಮಾಜಿ ಎಮ್‌ಎಲ್‌ಸಿ ತಿಪ್ಪಣಪ್ಪ ಕಮಕನೂರು ಮಾತನಾಡಿ, ಕೇಂದ್ರದ ನರೇಂದ್ರ ಮೋದಿಯವರ ಆಡಳಿತ ಹಾಗೂ ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಇತ್ತ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ಕೊಡದೇ ಅನ್ಯಾಯ ಮಾಡಿದ್ದಾರೆ. ಅದಕ್ಕಾಗಿ ಈ ಬಾರಿ 55 ವಾರ್ಡ್‌ಗಳ ಪೈಕಿ 45 ವಾರ್ಡ್‌ಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂಬ ಭರವಸೆ ಮಾತುಗಳನ್ನಾಡಿದರು.
ಅದೆನೇ ಇರಲಿ, ಕಲಬುರಗಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ತಾಯಗತಾಯ ಕಸರತ್ತು ನಡೆಸ್ತಿದೆ. ಆದ್ರೆ ಕಲಬುರಗಿ ಮಹಾನಗರ ಪಾಲಿಕೆಗೆ ಯಾರು ಅಧಿಪತಿಯಾಗಲಿದ್ದಾರೆ ಎನ್ನುವುದು ಮತದಾರ ಪ್ರಭು ಬಹಿರಂಗಪಡಿಸಬೇಕಿದೆ.