ಕಲಬುರಗಿ: ಎರಡು ದಿನದ ಹಿಂದೆ ನಗರದಲ್ಲಿ ಸಾವನ್ನಪ್ಪಿದ್ದ ವೃದ್ಧನಿಗೆ ಕೊರೊನಾ ವೈರಸ್ ಸೋಂಕು ಇತ್ತು ಎಂದು ಜಿಲ್ಲಾಧಿಕಾರಿ ಬಿ. ಶರತ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆ ಆ ವ್ಯಕ್ತಿಯ 8 ಜನ ಕುಟುಂಬಸ್ಥರು ಮತ್ತು ಆ ವ್ಯಕ್ತಿಯನ್ನು ಭೇಟಿ ಮಾಡಿದ್ದ ಸುಮಾರು 30 ಜನರ ಆರೋಗ್ಯ ತಪಾಸಣೆ ನಡೆಸಿ, ನಿಗಾ ವಹಿಸಲಾಗಿದೆ.
ಕಲಬುರಗಿ ಮೊಮಿನಪೂರ ಬಡಾವಣೆಯ ನಿವಾಸಿ ಮಹಮ್ಮದ್ ಹುಸ್ಸೇನ್ ಸಿದ್ದಿಕಿ (76) ಕೊರೊನಾ ವೈರಸ್ನಿಂದಲೇ ಮೃತಪಟ್ಟಿದ್ದಾರೆ. ಎರಡು ದಿನದ ಹಿಂದೆ ಮೃತಪಟ್ಟ ಸಿದ್ದಕಿ ಕೊರೊನಾ ರೋಗದಿಂದಲೇ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತು. ಆದ್ರೆ ಇದೀಗ ಲ್ಯಾಬ್ ವರದಿ ಬಂದಿದ್ದು, ವೃದ್ಧ ಕೊರೊನಾಗೆ ಬಲಿಯಾಗಿರುವುದು ದೃಢಪಟ್ಟಿದೆ.
ಜನವರಿ 29 ರಂದು ಸೌದಿ ಅರೇಬಿಯಾಕ್ಕೆ ಯಾತ್ರೆಗೆ ತೆರಳಿದ್ದ ಮಹಮ್ಮದ್ ಹುಸೇನ್ ಸಿದ್ದಿಕಿ ಒಂದು ತಿಂಗಳ ನಂತರ ಫೆ. 29 ರಂದು ಹೈದ್ರಾಬಾದ ಮೂಲಕ ಕಲಬುರಗಿಗೆ ಆಗಮಿಸಿದ್ದರು. ಬಳಿಕ ಮಾರ್ಚ್ 5 ರಂದು ಜ್ವರ, ಕೆಮ್ಮು, ಧಮ್ಮಿನಿಂದ ಬಳಲಿದ ಕಾರಣ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾರ್ಚ್ 8 ರಂದು ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ತಪಾಸಣೆಗಾಗಿ ಬೆಂಗಳೂರು ಲ್ಯಾಬ್ಗೆ ಕಳಿಸಿದ್ದರು.
ಆದ್ರೆ ಮಾರ್ಚ್ 9 ಸಿದ್ದಿಕಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಕಲಬುರಗಿಯಿಂದ ಹೈದ್ರಾಬಾದ್ನ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ದಾಖಲಿಸಿಕೊಳ್ಳಲಿಲ್ಲ ಎನ್ನಲಾಗ್ತಿದೆ. ಈ ಹಿನ್ನೆಲೆ ಮರಳಿ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ರಾತ್ರಿ 11 ಗಂಟೆಗೆ ಪ್ರಾಣಪಕ್ಷಿ ಹಾರಿಹೋಗಿತ್ತು. ಬಳಿಕ ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.