ಕಲಬುರಗಿ: ಕೊರೊನಾದಿಂದ ಕಂಗೆಟ್ಟ ವಾಣಿಜ್ಯೋದ್ಯಮ ಕೊರೊನಾ ಅನ್ಲಾಕ್ ನಂತರವೂ ಚೇತರಿಕೆ ಕಾಣ್ತಿಲ್ಲ. ಅನ್ಲಾಕ್ ಆರಂಭಗೊಂಡು ತಿಂಗಳು ಕಳೆಯುತ್ತಾ ಬಂದರೂ ಕೂಡಾ ವ್ಯಾಪಾರ ವಹಿವಾಟು ಮೊದಲಿನಂತೆ ಚೇತರಿಸಿಕೊಂಡಿಲ್ಲ. ಇದರ ಮಧ್ಯೆಯೇ ಕಲಬುರಗಿ ಮಹಾನಗರ ಪಾಲಿಕೆ ತೆಗೆದುಕೊಂಡ ನಿರ್ಣಯ ವ್ಯಾಪಾರಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೊರೊನಾ 2ನೇ ಅಲೆ ಹೊಡೆತಕ್ಕೆ ಜನ ಜೀವನ ಅಕ್ಷರಶಃ ಬೀದಿಗೆ ಬಂದಿದೆ. ಮತ್ತೊಂದೆಡೆ ವಾಣಿಜೋದ್ಯಮ, ವ್ಯಾಪಾರ-ವಹಿವಾಟು ಸ್ಥಗಿತವಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಇದೀಗ ಕೊರೊನಾ ಅನ್ಲಾಕ್ ಬಳಿಕ ಜನರು ತಮ್ಮ ಬದುಕನ್ನ ಕಟ್ಟಿಕೊಳ್ಳೊಕೆ ಮುಂದಾಗಿದ್ದಾರೆ.
ಆದರೆ, ಅನ್ಲಾಕ್ ಬಳಿಕವೂ ವ್ಯಾಪಾರ- ವಹಿವಾಟು ಮೊದಲಿನ ಹಾಗೆ ಚೇತರಿಕೆ ಕಂಡಿಲ್ಲ ಅಂತಾ ವ್ಯಾಪಾರಸ್ಥರು ಆತಂಕದಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪರಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. 2020 -21ರ ಸಾಲಿನ ತೆರಿಗೆಯನ್ನ 15 ಪ್ರತಿಶತದಷ್ಟು ಹೆಚ್ಚಳ ಮಾಡುವ ಮೂಲಕ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪರಸ್ಥರಿಗೆ ಶಾಕ್ ನೀಡಿದೆ. ಮೊದಲೇ ಆರ್ಥಿಕವಾಗಿ ಕಂಗೆಟ್ಟಿದ್ದ ವ್ಯಾಪಾರಸ್ಥರು ಇದೀಗ 15 ಪ್ರತಿಶತದಷ್ಟು ಹೆಚ್ಚಳ ಮಾಡಿರೋದ್ರಿಂದ ವ್ಯಾಪರಸ್ಥರಿಗೆ ತೆರಿಗೆ ಭಾರವಾಗಿ ಕಟ್ಟೋಕೆ ಆಗೋದಿಲ್ಲ ಅನ್ನುವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಏಕಾ ಏಕಿಯಾಗಿ ಮಹಾನಗರ ಪಾಲಿಕೆ ತೆರಿಗೆ ಹೆಚ್ಚಳ ಮಾಡುವುದರ ಬಗ್ಗೆ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳ ಗಮನಕ್ಕೂ ತಂದಿಲ್ಲ ಅನ್ನೋದು ಜನಪ್ರತಿನಿಧಿಗಳ ವಾದ. ಆದರೆ, ಮಹಾನಗರ ಪಾಲಿಕೆ ಆಯುಕ್ತ ಮಾತ್ರ ಸರ್ಕಾರದ ನಿರ್ದೆಶನದಂತೆ ನಾವು ತೆರಿಗೆಯನ್ನ ಹೆಚ್ಚಳ ಮಾಡಿದ್ದೇವೆ. ಕಮರ್ಷಿಯಲ್ ಪ್ರಾಪರ್ಟಿ ಮೌಲ್ಯ, ಗಾರ್ಡನ್ ಮೌಲ್ಯ, ಆಸ್ತಿಯ ಮೌಲ್ಯ ಜೊತೆಗೆ ಸಬ್ ರಿಜಿಸ್ಟಾರ್ ವ್ಯಾಲ್ಯೂ ಏನಿದೆಯೋ, ಅದರ ಪ್ರಕಾರವೇ ತೆರಿಗೆ ಹೆಚ್ಚಳ ಮಾಡಲಾಗಿದೆ.
ಮೊದಲು 2005 -06 ರಲ್ಲಿ ಸರ್ಕಾರ ನಿಯಮದ ಪ್ರಕಾರ, ತೆರಿಗೆ ತೆಗೆದುಕೊಳ್ಳಲಾಗುತ್ತಿತ್ತು. ಇವಾಗ 2018 -19 ರ ಸಾಲಿನ ತೆರಿಗೆ ಅನ್ವಯದಂತೆ ತೆರಿಗೆ ವಸೂಲಿ ಮಾಡುವಂತೆ ಸೂಚನೆ ಇದೆ. ಹಾಗಾಗಿ, ಸರ್ಕಾರದ ನಿರ್ದೇಶನದಂತೆ 18-19 ರ ಸಾಲಿನ ಪ್ರಕಾರ ತೆರಿಗೆಯನ್ನ ವಸೂಲಿ ಮಾಡೋದಕ್ಕೆ ಮುಂದಾಗಿದೆ. ಈ ಹೊಸ ತೆರಿಗೆ ನಿಯಮದಿಂದ ತೆರಿಗೆಯಲ್ಲಿ ಸ್ವಲ್ಪ ಹೆಚ್ಚಳ ಆಗಿದೆ. ಆದರೆ, ಸರ್ಕಾರದ ನಿರ್ದೇಶನದ ಪ್ರಕಾರವೇ ನಾವು ತೆರಿಗೆ ಸಂಗ್ರಹ ಮಾಡುತ್ತಿದ್ದೇವೆ ಅಂತಾ ಸ್ಪಷ್ಟೀಕರಣ ನೀಡಿದ್ದಾರೆ.
ವಿನಾಯ್ತಿ ನೀಡಬೇಕು : ಸದ್ಯ ವ್ಯಾಪಾರ ವಹಿವಾಟಿನಿಂದ ಬರುವ ಆದಾಯ ದೈನಂದಿನ ಖರ್ಚು ವೆಚ್ಚ, ತೆರಿಗೆ, ಬಾಡಿಗೆ, ವಿದ್ಯುತ್ ಬಿಲ್, ನೌಕರರ ಸಂಬಳಕ್ಕೆ ಸರಿಯಾಗುತ್ತಿಲ್ಲ. ಒಂದು ರೂಪಾಯಿಯ ಗಳಿಕೆಯೂ ಆಗ್ತಿಲ್ಲ ಅಂತಾ ವ್ಯಾಪರಸ್ಥರು ಪರದಾಟ ನಡೆಸುತ್ತಿದ್ದಾರೆ. ಅದೇನೆ ಆಗಲಿ ಸರ್ಕಾರದ ನಿಯಮದ ಪ್ರಕಾರ ತೆರಿಗೆಯನ್ನ ವಸೂಲಿ ಮಾಡೋಕೆ ಮುಂದಾದ್ರೆ ಸರ್ಕಾರ ವ್ಯಾಪಾರಸ್ಥರ ಬಗ್ಗೆ ಕಾಳಜಿ ವಹಿಸಿ ತೆರಿಗೆಯಲ್ಲಿ ವಿನಾಯ್ತಿ ನೀಡಬೇಕು ಅನ್ನೋದು ವ್ಯಾಪಾರಸ್ಥರ ಮನವಿಯಾಗಿದೆ.
ಓದಿ: ಪಂಚಮಸಾಲಿ ಪೀಠಕ್ಕೆ ಸಿಎಂ ಭೇಟಿ.. ಶ್ರೀಗಳಿಂದ ಆಶೀರ್ವಾದ ಪಡೆದ ಬಿ ಎಸ್ ಬೊಮ್ಮಾಯಿ..