ಸೇಡಂ (ಕಲಬುರಗಿ): ರವಿವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲೂಕಿನ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ಮಳಖೇಡ ಗ್ರಾಮದ ಕಾಗಿಣಾ ಬ್ರಿಡ್ಜ್ ಮತ್ತೆ ಮುಳುಗಡೆಯಾಗಿದ್ದು, ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
ರವಿವಾರ ಮಧ್ಯರಾತ್ರಿ ಮಳಖೇಡದ ಬ್ರಿಡ್ಜ್ ರಸ್ತೆ ಸಮನಾಗಿ ಹರಿಯುತ್ತಿದ್ದ ನೀರು, ಸೋಮವಾರ ಸಂಜೆ ಹೊತ್ತಿಗೆ ಬ್ರಿಡ್ಜ್ ಮೇಲೆ ಹರಿಯಲು ಆರಂಭಿಸಿದೆ. ಇದರಿಂದ ಬ್ರಿಡ್ಜ್ ಮತ್ತೆ ಮುಳುಗಡೆಯಾಗಿದ್ದು, ಸ್ಥಳೀಯ ಪೊಲೀಸರು ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಭೀಕರ ಮಳೆಯಿಂದ ತಾಲೂಕಿನ ಮಳಖೇಡ ಸ್ಟೇಷನ್ ತಾಂಡಾ, ಮದನಾ ಸೇರಿದಂತೆ ಅನೇಕ ಗ್ರಾಮಗಳ ರಸ್ತೆಗಳು ಜಲಾವೃತವಾಗಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಕಷ್ಟ ಎದುರಿಸುವಂತಾಗಿದೆ.
ಸೇಡಂ ನ ಕಮಲಾವತಿ ನದಿ ಸೇರಿದಂತೆ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕೃಷಿ ಜಮೀನುಗಳಲ್ಲಿ ಮೊಳಕಾಲೆತ್ತರಕ್ಕೆ ನೀರು ಜಮಾವಣೆಯಾಗಿ ಬೆಳೆ ನಷ್ಟ ಉಂಟಾಗಿದೆ.