ಕಲಬುರಗಿ: ಕೋವಿಡ್-19 ತಡೆಗಟ್ಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಇತರೆ ಇಲಾಖೆಗಳ ಸಿಬ್ಬಂದಿ ಮನೆಗೆ ಬಂದಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಶರತ್ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕೋವಿಡ್-19 ತಡೆಗಟ್ಟಲು ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ತಂಡ ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆಗಾಗಿ ಮನೆಗೆ ಬಂದಾಗ ಸಾರ್ವಜನಿಕರು ಸಹಕರಿಸಬೇಕು. ಒಂದು ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಿಜಾಮುದ್ದೀನ್ ಪ್ರಾರ್ಥನೆಗೆ ಹೋಗಿ ಮಾಹಿತಿ ನೀಡದಿದ್ದರೆ ಪ್ರಕರಣ ದಾಖಲು: ನಿಜಾಮುದ್ದೀನ್ ಪ್ರಾರ್ಥನೆಗೆ ಹೋಗಿ ಜಿಲ್ಲೆಗೆ ಮರಳಿದವರು ಅಥವಾ ಕುಟುಂಬಸ್ಥರು ಪ್ರವಾಸದ ವಿಷಯ ಮುಚ್ಚಿಡದೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಬೇಕು (08472-263604, 9480803500). ಮಾಹಿತಿ ನೀಡದಿದ್ದರೆ ಕೊರೊನಾ ತಡೆಯಲು ಕಷ್ಟವಾಗುತ್ತದೆ. ಇದರಿಂದ ಮತ್ತೊಬ್ಬರಿಗೂ ತೊಂದರೆಯಾಗುವ ಸಾಧ್ಯತೆ ಇರುವ ಕಾರಣ ಸ್ವತಃ ತಾವೇ ಮಾಹಿತಿ ನೀಡಬೇಕು. ಒಂದು ವೇಳೆ ಪೊಲೀಸ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಗುತ್ತದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಉದ್ಯೋಗ, ಪ್ರವಾಸಕ್ಕೆಂದು ವಿದೇಶಕ್ಕೆ ಹೋಗಿ ಜಿಲ್ಲೆಗೆ ಮರಳಿದರು ಕೂಡಾ ತಪ್ಪದೇ ಕರೆ ಮಾಡಿ ಮಾಹಿತಿ ನೀಡುವಂತೆ ಎಸ್ಪಿ ಯಡಾ ಮಾರ್ಟಿನ್ ಎಚ್ಚರಿಕೆ ನೀಡಿದ್ದಾರೆ. ಎಸ್ಪಿ ಯಡಾ ಮಾರ್ಟಿನ್ ಎಚ್ಚರಿಕೆ ಇನ್ನು ಕೊರೊನಾ ವೈರಸ್ ಕುರಿತಂತೆ ಜಿಲ್ಲೆಯಲ್ಲಿ ಕೆಲವು ಕಿಡಿಗೇಡಿಗಳು, ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂತಹ ಕೃತ್ಯ ಎಸಗಿದವರ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.